ಧಾರವಾಡ: ಕೊರೊನಾ ಅಲೆಯ ನಡುವೆ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ ವಯೋವೃದ್ಧರಿಗೆ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುವ ಮೂಲಕ ಧಾರವಾಡದ ವೈದ್ಯರ ತಂಡವೊಂದು ಮಾನವೀಯತೆ ಮೆರೆದಿದೆ.
ನಗರದ ಮಾಳಮಡ್ಡಿಯಲ್ಲಿರುವ ಚಿರಾಯು ಆರೋಗ್ಯ ಜಾಗೃತಿ ಸಂಸ್ಥೆ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ. ವಯೋವೃದ್ಧರು ಸೇರಿದಂತೆ ಹಲವು ರೋಗಿಗಳ ಮನೆ ಮನೆಗೆ ಹೋಗಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ಪಾಲಿಗೆ ವೈದ್ಯರು ಸಂಜೀವಿನಿಯಾಗಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಆಸ್ಪತ್ರೆಗೆ ಹೋಗಲಾರದೆ ರೋಗಿಗಳು, ವೃದ್ಧರು ಪರದಾಡುತ್ತಿದ್ದಾರೆ. ಈ ಹಿನ್ನೆಲೆ ನಗರದ ಯಾವ ಮೂಲೆಯಿಂದಾದರೂ ರೋಗಿಗಳು ಕರೆ ಮಾಡಿದ್ರೆ ಸ್ವಂತ ಖರ್ಚಿನಲ್ಲಿ ಅಲ್ಲಿ ಹೋಗುತ್ತಾರೆ. ಔಷಧ ಖರ್ಚು ಬಿಟ್ಟು ವೈದ್ಯರು ಯಾವುದೇ ಹಣ ಪಡೆಯುವದಿಲ್ಲ. ತೀರಾ ಬಡವರಿದ್ದರೆ ಕೆಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಔಷಧೋಪಚಾರವನ್ನು ಉಚಿತವಾಗಿ ನೀಡುತ್ತಾರೆ.
ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಈ ಸೇವಾ ಕಾರ್ಯ ಕೈಗೊಂಡಿದ್ದರು. ಈಗ ಪುನಃ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ. ವೈದ್ಯರು ಮಾತ್ರವಲ್ಲದೆ ಲ್ಯಾಬ್ ಟೆಕ್ನಿಶಿಯನ್ಗಳು ಸಹ ಕೈ ಜೋಡಿಸಿದ್ದಾರೆ. ಇದರ ಜೊತೆಗೆ ಹೋಮ್ ಐಸೋಲೇಷನ್ನಲ್ಲಿರುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನೂ ಈ ತಂಡ ಮಾಡುತ್ತಿದೆ. ವೈದ್ಯ ತಂಡದ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.