ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಿಸಾನ್ ಸಂಯುಕ್ತ ಮೋರ್ಚಾದ ಅಖಿಲ ಭಾರತ ಸಮಿತಿ ನಾಳೆ ಕರೆ ನೀಡಿರುವ ಹೆದ್ದಾರಿ ಬಂದ್ಗೆ ಧಾರವಾಡದಲ್ಲಿ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.
ಧಾರವಾಡದ ಸಂಯುಕ್ತ ಹೋರಾಟ ರೈತ, ಕಾರ್ಮಿಕ, ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಯರಿಕೊಪ್ಪ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಾಗುವುದು ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಹೋರಾಟಗಾರ ಲಕ್ಷ್ಮಣ ಜಡಗಣ್ಣವರ ಈಟಿವಿ ಭಾರತಕ್ಕೆ ತಿಳಿಸಿದರು.
ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ಹೋರಾಟನಿರತ ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಹೋರಾಟದ ಸಮಯದಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಬಿಡುಗಡೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.