ಧಾರವಾಡ: ಇಲ್ಲಿನ ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಕಾರ್ಯಕರ್ತನಿಂದ ನಬೀಸಾಬ್ ವಿರುದ್ದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ಕಲ್ಲಂಗಡಿ ತೆರವು ವಿಚಾರವಾಗಿ ವ್ಯಾಪಾರಿ ನಬೀಸಾಬ್ ಅವರು ಮಹಾಲಿಂಗ ಐಗಳಿ ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದರು. ಆ ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಹೊರಬಂದ ಬಳಿಕ ನಬೀಸಾಬ್ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.
ಕಲ್ಲಂಗಡಿ ಗಲಾಟೆಯಲ್ಲಿ ಬಂಧಿತನಾಗಿದ್ದ ಮಹಾಲಿಂಗ ಐಗಳಿ ಏಪ್ರಿಲ್ 9ರಂದು ನುಗ್ಗಿಕೇರಿಯಲ್ಲಿ ನಡೆದ ಘಟನೆಗಳನ್ನು ಪ್ರಸ್ತಾಪಿಸಿ ದೂರು ದಾಖಲಿಸಿದ್ದಾರೆ. ಘಟನೆ ನಡೆದಾಗ ನಬೀಸಾಬ್ ಇರಲಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ನಾವು ದೇವರ ದರ್ಶನ ಬಳಿಕ ಕಲ್ಲಂಗಡಿ ತಿನ್ನಲು ಹೋಗಿದ್ದೆವು. ಆಗ ಕಲ್ಲಂಗಡಿ ಮಾರುವವನು ಉಗುಳಿ ಕೊಡುತ್ತಿದ್ದನು. ಹೀಗೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಹೇಳಿದ್ದನು. ಇದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದಾಗ ಆತ ನಮಗೆ ಚಾಕು ತೋರಿಸಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನನ್ನ ಜೊತೆಗೆ ಇದ್ದ ಮೈಲಾರಪ್ಪನನ್ನು ಆ ವ್ಯಕ್ತಿ ನೂಕಿದ್ದನು. ಆಗ ಮೈಲಾರಪ್ಪ ಕಲ್ಲಂಗಡಿ ತಳ್ಳುಗಾಡಿ ಮೇಲೆ ಬಿದ್ದಿದ್ದನು. ಈ ರೀತಿ ಮಾಡಿದ ವ್ಯಕ್ತಿ ಬಿಳಿ ಶರ್ಟ್, ಕಪ್ಪು ಬೂದಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಆದರೆ ಮರುದಿನ ನಬೀಸಾಬ್ ಎಂಬಾತ ನಮ್ಮ ಮೇಲೆ ದೂರು ದಾಖಲಿಸಿದ್ದಾನೆ. ಘಟನೆಯಲ್ಲಿ ಭಾಗಿಯಾದ ನಿಜವಾದ ವ್ಯಕ್ತಿ ಬೇರೆ ಇದಾನೆ ಎಂದು ದೂರಿನಲ್ಲಿ ಪ್ರಸ್ತಾಪ ಮಾಡಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ನಿಷೇಧಾಜ್ಞೆ ಮುಂದುವರೆಸಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ