ಧಾರವಾಡ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ನೀರು ಪಾಲಾಗಿವೆ.
ನವಲಗುಂದ ತಾಲೂಕಿನ ಬ್ಯಾಲ್ಯಾಳ ತುಪ್ಪರಿಹಳ್ಳ ಸಂಪೂರ್ಣ ತುಂಬಿದ್ದು, ಹೆಸರು, ಹತ್ತಿ, ಹುರುಳಿ, ಈರುಳ್ಳಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಹೊಲವನ್ನು ನಂಬಿ ಬದುಕುತ್ತಿದ್ದ ರೈತನ ಪಾಡು ಈಗ ಹೇಳತಿರದಾಗಿದೆ. ಸುಮಾರು ಎಂಟು ಎಕರೆ ಹೊಲ ನೀರು ಪಾಲಾಗಿರುವುದು ರೈತರನ್ನು ಕಂಗಾಲಾಗಿಸಿದೆ.
ಮಳೆಗಾಗಿ ಪೂಜೆ ಮಾಡುವ ರೈತ ಈಗ ಅದೇ ಮಳೆಗೆ ಶಾಪ ಹಾಕುತ್ತಿದ್ದಾನೆ. ಈ ಪರಿ ಸತತ ಮಳೆ ಸುರಿದು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡರು, ಯಾವೊಬ್ಬ ಅಧಿಕಾರಿಯೂ ಸಹ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬರೀ ವೋಟ್ ಕೇಳೋಕೆ ಬಂದರೆ ಸಾಲದು, ಸ್ವಾಮಿ ಇವಾಗ ಬನ್ನಿ, ನಮ್ಮ ಕಷ್ಟ ಪರಿಹರಿಸಿ ಎಂದು ರೈತರು ಒತ್ತಾಯಿಸಿದ್ದಾರೆ.