ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಣ ರಂಗೇರುತ್ತಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಸಾಕಷ್ಟು ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿವೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಎಐಸಿಸಿಯಿಂದ ನೇಮಕಗೊಂಡಿರುವ ಚುನಾವಣೆ ವೀಕ್ಷಕ, ಅಂಡಮಾನ್-ನಿಕೋಬಾರ್ ಸಂಸದ ಕುಲದೀಪ ರೈ ಶರ್ಮಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಶಾಸಕ ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ ಮಾನೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
23 ಅಂಶಗಳ ಪ್ರಣಾಳಿಕೆ
ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆ 23 ಅಂಶಗಳನ್ನೊಳಗೊಂಡಿದ್ದು, ಪ್ರಮುಖವಾಗಿ ಆರೋಗ್ಯ, ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಮೆಟ್ರೋ ರೈಲು, ಜನರ ಆರೋಗ್ಯ, ಪಾಲಿಕೆ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ, ರಾಜಕಾಲುವೆ ದುರಸ್ತಿ, ಕ್ರೀಡಾಂಗಣ ನಿರ್ಮಾಣ ಪ್ರಮುಖ ಅಂಶಗಳಾಗಿವೆ.
ಪಕ್ಷದ ಶಿಸ್ತು ಉಲ್ಲಂಘಿಸಿದವರ ಮೇಲೆ ಕ್ರಮ:
ಮಹಾನಗರ ಪಾಲಿಕೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಳ್ಳುವುದು ಸಹಜ. ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂತವರು ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮನವೊಲಿಸಿದ್ದೇವೆ. ಆದರೂ ಕೆಲವರು ತಗೆದುಕೊಂಡಿಲ್ಲ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದಕ್ಕೆ ಇವರ ವಿರುದ್ಧ ಕ್ರಮ ತಗೆದುಕೊಳ್ಳಲಾಗುವುದು ಎಂದು ಚುನಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಗಣೇಶ ಟಗರಗುಂಟಿ ಅವರು ಕಳೆದ ಬಾರಿ ಮಹಾನಗರ ಪಾಲಿಕೆಯಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಈಗ ಟಿಕೆಟ್ ಸಿಗದ ಕಾರಣ ರಾಜೀನಾಮೆ ನೀಡಿದ್ದು, ಅವರಿಗೆ ಸಾಕಷ್ಟು ಅವಕಾಶವಿದೆ. ರಾಜೀನಾಮೆ ಹಿಂದಕ್ಕೆ ಪಡೆಯಬೇಕು ಎಂದರು.
ಓದಿ: ಹುಬ್ಬಳ್ಳಿ ಬಿಜೆಪಿಯಲ್ಲಿ ಶೀತಲ ಸಮರ...ಶಮನವಾಗದ ಅರವಿಂದ ಬೆಲ್ಲದ್ ಮುನಿಸು