ಹುಬ್ಬಳ್ಳಿ: ಹಣ, ಹೆಂಡದ ಬಲದಿಂದ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ದೊಂಬರಾಟಕ್ಕೆ ಕುಂದಗೋಳ ಜನ ಬೆಲೆ ಕೊಡಲ್ಲಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹರಿಹಾಯ್ದರು.
ಕುಂದಗೋಳದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಾಡಿದ್ದೆ. ಅಂದು ಗೇಲಿ ಮಾಡಿದ್ದ ರಾಹುಲ್ ಗಾಂಧಿ ಈಗ ರೈತರಿಗೆ ಪ್ರತ್ಯೇಕ ಬಜೆಟ್ ಮಾಡುವುದಾಗಿ ಹೇಳುತ್ತಿದ್ದಾರೆ. ಅಪ್ಪಮಕ್ಕಳು ವಿಶ್ವಾಸದ್ರೋಹ ಮಾಡಿದ್ರೆ, ಕುಮಾರಸ್ವಾಮಿಯನ್ನು ಮೊದಲು ಸಿಎಂ ಮಾಡಿದ್ದು ಯಡಿಯೂರಪ್ಪ ಎಂದರು.
ತುಮಕೂರಲ್ಲಿ ದೇವೇಗೌಡರು , ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಕೋಲಾರದಲ್ಲಿ ಮುನಿಯಪ್ಪ ಮನೆಗೆ ಹೋಗುತ್ತಾರೆ. ಮತ್ತೇ ವೀರಪ್ಪ ಮೊಯ್ಲಿ ಕೂಡ ಸೋತು ಮನೆಗೆ ಹೋಗುತ್ತಾರೆ. ಮೇ 23ಕ್ಕೆ ಫಲಿತಾಂಶ ಬರುತ್ತಿದ್ದ ಹಾಗೆ ಕಾಂಗ್ರೆಸ್‌ನವರು ಮನೆಯಲ್ಲಿ ಇರಲ್ಲ, ಓಡಿ ಹೋಗುತ್ತಾರೆ. ಕುಮಾರಸ್ವಾಮಿಯವರೇ ಜನಹಿತ ಮರೆತಿದ್ದೀರಿ, ಭ್ರಷ್ಟಾಚಾರ ಮಾಡುತ್ತಾ ಜನರ ಹಣ ಲೂಟಿ ಮಾಡುತ್ತಿದ್ದೀರಿ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಜಾನುವಾರಿಗಳಿಗೆ ಮೇವು, ನೀರಿಲ್ಲ. ಯಾವುದೇ ಮಂತ್ರಿ ಜನರ ಕಷ್ಟ ಕೇಳಲು ಹೋಗಿಲ್ಲ ಎಂದರು.
ಇನ್ನು ಕುಂದಗೋಳ ಜನರು ಎಸ್.ಐ ಚಿಕ್ಕನಗೌಡ ಅವರನ್ನು ಗೆಲ್ಲಿಸಿ, ರಾಜಕೀಯ ಬದಲಾವಣೆಗೆ ನಾಂದಿ ಹಾಡುತ್ತಾರೆ. ಬಿಜೆಪಿ ಟಿಕೆಟ್ ತಪ್ಪಿರುವ ಎಂ ಆರ್. ಪಾಟೀಲ್ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಕೊಡಲಾಗುವುದು ಎಂದು ಅವರು ಹೇಳಿದರು.