ಹುಬ್ಬಳ್ಳಿ : ತನ್ನ ಜೊತೆ ಮದುವೆ ಆಗದಿದ್ದರೆ ನಿನ್ನ ಜೊತೆ ತೆಗೆಸಿಕೊಂಡಿರುವ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಯುವತಿಯೊಬ್ಬಳಿಗೆ ವಿವಾಹಿತನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಯಚೂರು ಮೂಲದ ಆನಂದಕುಮಾರ್ ಭೋವಿ ಎಂಬಾತ ಆರೋಪಿ. ಈತ ಮೊದಲೇ ಮದುವೆಯಾಗಿದ್ದ ವಿಷಯವನ್ನು ಮುಚ್ಚಿಟ್ಟು ಯುವತಿಯನ್ನು ಪ್ರೀತಿ ಮಾಡಿದ್ದಾನೆ.
ಆತ ಮೊದಲೇ ಮದುವೆಯಾಗಿರುವ ವಿಷಯ ಗೊತ್ತಾದ ಮೇಲೆ ಯುವತಿ ಆತನಿಂದ ದೂರವಾಗಿದ್ದಾಳೆ. ಆದರೆ, ಆತ ಮಾತ್ರ ಅವಳನ್ನು ಹಿಂಬಾಲಿಸುತ್ತಾ ಕಿರಿ ಕಿರಿ ಮಾಡುತ್ತಾ ಬಂದಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಅಧಿಕ ಲಾಭದ ಆಸೆ ತೋರಿಸಿ 4 ಲಕ್ಷ ರೂ. ವಂಚನೆ.. ದೂರು ದಾಖಲು!
ಅಲ್ಲದೇ ನ.14ರಂದು ವೀರಾಪುರ ಓಣಿಯಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿದ್ದ ಎಂದು ಯುವತಿಯು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.