ಹುಬ್ಬಳ್ಳಿ: ಹದಗೆಟ್ಟು ಹೋದ ರಸ್ತೆ ಸರಿಪಡಿಸಲು ಪಾಲಿಕೆ ಸದಸ್ಯರಿಗೆ ಅದೆಷ್ಟೋ ಬಾರಿ ಮನವಿ ಮಾಡಿದರೂ ಸ್ಪಂದಿಸದ ಕಾರಣ, ನಗರದ ತಿಮ್ಮಸಾಗರ ಕಾಲೊನಿಯ ನಾಗರಿಕರೇ ಸೇರಿಕೊಂಡು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ನಗರದ ತಿಮ್ಮಸಾಗರ ಕಾಲೋನಿಯ ರಸ್ತೆ ಹದಗೆಟ್ಟು ಸುಮಾರು ಎರಡು ವರ್ಷಗಳೇ ಕಳೆದಿತ್ತು. ಸ್ಥಳೀಯರು ಸಂಬಂಧಪಟ್ಟವರಿಗೆ ಮನವಿ ನೀಡುತ್ತಲೇ ಇದ್ರು. ಮನವಿಗೆ ಶಾಸಕರು ಕೇವಲ ಆಶ್ವಾಸನೆ ಏನೋ ನೀಡಿದ್ದರು. ಆದರೆ ರಸ್ತೆ ಮಾತ್ರ ಹಾಗೇ ಇತ್ತು. ಹದಗೆಟ್ಟ ರಸ್ತೆಯಿಂದ ಆಟೋ ಪಲ್ಟಿಯಾದ ಘಟನೆಯೂ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಹೀಗಾಗಿ ಅಧಿಕಾರಿಗಳಿಗಾಗಿ ಕಾದೂ ಕಾದೂ ಸುಸ್ತಾದ ಕಾಲೋನಿಯ ನಿವಾಸಿಗಳು, ಸ್ವಂತ ಹಣದಲ್ಲಿಯೇ ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಶಾಸಕರು ಸ್ಪಂದನೆ ನೀಡದ ಕಾರಣ, ಸ್ಥಳೀಯ ನಿವಾಸಿಗಳು ಪ್ರತಿ ಮನೆಗೆ ಇಂತಿಷ್ಟು ಎಂದು ಹಣ ಸಂಗ್ರಹಣೆ ಮಾಡಿ, ರಸ್ತೆ ರಿಪೇರಿ ಮಾಡಿದ್ದಾರೆ. ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇನ್ನಾದರೂ ಪಾಲಿಕೆ ಸದಸ್ಯರು ಮತ್ತು ಶಾಸಕರು ಎಚ್ಚೆತ್ತುಕೊಂಡು ಬಡವರ ಗೋಳು ಕೇಳಬೇಕು. ಕಾಲೋನಿಗೆ ಗಟಾರ ಮತ್ತು ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಬೇಕು. ಬಡವರೇ ವಾಸವಿರುವ ಈ ಕಾಲೋನಿಯಲ್ಲಿ ದಿನದ ದುಡಿಮೆಯನ್ನು ಬಿಟ್ಟು ಇಂತಿಷ್ಟು ಹಣ ಹಾಕಿ ನಾವೇ ದುರಸ್ತಿ ಕಾರ್ಯ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಕಾಲೋನಿ ಜನರು ಆಕ್ರೋಶ ಹೊರ ಹಾಕಿದ್ದಾರೆ.