ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಹೋರಾಟ ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಈ ಸಂಬಂಧ ಹುಬ್ಬಳ್ಳಿಯ ಚೆನ್ನಮ್ಮ ಗಜಾನನ ಉತ್ಸವ ಸಮಿತಿ ರಾತ್ರೋರಾತ್ರಿ ಸಭೆ ನಡೆಸಿದ್ದು, ಮಹತ್ವದ ತೀರ್ಮಾನ ಕೈಗೊಂಡಿದೆ.
ಮಹಾನಗರ ಪಾಲಿಕೆ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಸಮಿತಿ ಸಭೆ ಮಾಡಿದೆ. ಇನ್ನೊಂದೆಡೆ, ಪಾಲಿಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಈದ್ಗಾ ಮೈದಾನಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಪೂರ್ವಾನುಮತಿ ಪತ್ರ ಹಾಜರುಪಡಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಉತ್ಸವ ಸಮಿತಿಗೆ ಪಾಲಿಕೆ ಆಯುಕ್ತ ಡಾ.ಕೆ.ಗೋಪಾಲಕೃಷ್ಣ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಈದ್ಗಾ ವಿವಾದ.. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮೂರು ದಿನ ಗಡುವು
ಆದರೆ, ಪಾಲಿಕೆಯಿಂದ ಗೊಂದಲದ ಉತ್ತರ ದೊರೆತ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಕ್ಕೆ ನಿರ್ಧರಿಸಲಾಗಿದೆ. ನಾಳೆ ಹುಬ್ಬಳ್ಳಿಯಲ್ಲಿ ಪ್ರತಿಭಟಿಸಿ ಸಹಿ ಸಂಗ್ರಹ ನಡೆಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಹನುಮಂತಸಾ ನಿರಂಜನ ತಿಳಿಸಿದರು.
ದುರ್ಗದ ಬೈಲ್ ವೃತ್ತದಿಂದ ಪಾಲಿಕೆ ಕಚೇರಿವರೆಗೆ ಪ್ರತಿಭಟನೆ ಹಾಗೂ ಭಜನೆ ಮೂಲಕ ಆಗಮಿಸಿ ಸಹಿ ಸಂಗ್ರಹಿಸಲಿದ್ದು, ಇದು ಪಾಲಿಕೆಗೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ: ನಮಾಜ್ ಮಾಡಲು ಬಿಟ್ಟಮೇಲೆ ಗಣಪತಿ ಇಡಲು ಬಿಡಬೇಕು: ಸಿ ಟಿ ರವಿ