ಹುಬ್ಬಳ್ಳಿ : ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ಸರ್ವೋದಯ ಶಿಕ್ಷಣ ಟ್ರಸ್ಟ್ಗೆ ಯಾವುದೇ ಸಂಬಂಧವಿಲ್ಲ. ಆದರೂ ಸಭಾಪತಿಗಳು ಟ್ರಸ್ಟ್ ಆಡಳಿತದಲ್ಲಿ ಸುಖಾಸುಮ್ಮನೇ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್ ಗುಡಸಲಮನಿ ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಟ್ರಸ್ಟ್ನ ಅಧ್ಯಕ್ಷ ಎಂದು ಸುಳ್ಳು ಹೇಳಿಕೊಂಡು, ತಮ್ಮ ಅಧಿಕಾರ ದುರ್ಬಳಕೆಯಿಂದ ಶಿಕ್ಷಣಾಧಿಕಾರಿಗಳ ಜೊತೆ ಸೇರಿ ಸರ್ವೋದಯ ಟ್ರಸ್ಟ್ನ ಆಸ್ತಿ ಹೊಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.
ಸರ್ವೋದಯ ಶಿಕ್ಷಣ ಟ್ರಸ್ಟ್ ಮೂಲತಃ ರಾಜನಹಳ್ಳಿಯ ವಾಲ್ಮೀಕಿ ಪೀಠಕ್ಕೆ ಸೇರಿದ್ದಾಗಿದೆ. ಈ ಟ್ರಸ್ಟ್ಗೆ ನಿಜವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಧ್ಯಕ್ಷರಾಗಿದ್ದಾರೆ.
ಆದರೆ, ಹೊರಟ್ಟಿ ಅವರು ತಾವು ಅಧ್ಯಕ್ಷರು ಎಂದ್ಹೇಳಿ ಟ್ರಸ್ಟ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ, ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಧಾರವಾಡದ ಜಿಲ್ಲಾ ನ್ಯಾಯಾಲಯ 16ನೇ ಜನವರಿ 2016ರಂದು ಸರ್ವೋದಯ ಶಿಕ್ಷಣ ಟ್ರಸ್ಟ್ ಮತ್ತು ಹೊರಟ್ಟಿ ಅವರಿಗೆ ಯಾವುದೇ ಕಾನೂನು ಬದ್ಧ ಅಧಿಕಾರವಿಲ್ಲವೆಂದು ಆದೇಶಿಸಿದೆ.
ಆದರೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಅಪರ ಆಯುಕ್ತರು ಹಾಗೂ ಕಾರ್ಯದರ್ಶಿಗಳು ಟ್ರಸ್ಟ್ಗೆ ಸಂಬಂಧವಿಲ್ಲದ ಹೊರಟ್ಟಿ ಅವರಿಗೆ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಅಕ್ರಮವಾಗಿ ಅನುಮತಿ ನೀಡಿದ್ದಾರೆ ಎಂದು ದೂಷಿಸಿದರು.
ವಾಲ್ಮೀಕಿ ಮಹಾಸಭಾದ ಆರೋಪ ಸುಳ್ಳು: ಬಸವರಾಜ್ ಹೊರಟ್ಟಿ
ಧಾರವಾಡದ ಸರ್ವೋದಯ ಶಿಕ್ಷಣ ಟ್ರಸ್ಟ್ಗೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಯಾರಾದರೂ ಸಾರ್ವಜನಿಕ ಆಸ್ತಿ ಕಬಳಿಸಲು ಮುಂದಾಗಿದ್ದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನು ವ್ಯವಸ್ಥೆ ಇದೆ. ಈ ವಿಷಯ ಈಗಾಗಲೇ ನ್ಯಾಯಲಯದಲ್ಲಿದ್ದು, ಅಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.
ಟ್ರಸ್ಟ್ಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಕಾನೂನು ಪ್ರಕಾರ ಜಾಹೀರಾತು ನೀಡಲಾಗಿದೆ. ಕಾನೂನು ಮೀರಿ ನಾವು ಆಸ್ತಿ ಕಬಳಿಕೆ ಮಾಡಿದ್ದರೆ, ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದರು.
ಇದನ್ನೂ ಓದಿ: ನಾಯಕನ ಸೃಷ್ಟಿಸುವ ಯೋಗ್ಯತೆ ಇಲ್ಲ, ಪಕ್ಷ ಕಟ್ಟುವ ಧಂ ಇಲ್ಲ: ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಕಿಡಿ