ಹುಬ್ಬಳ್ಳಿ: ಕೇಂದ್ರ ನೆರೆ ಅಧ್ಯಯನ ತಂಡ ಶುಕ್ರವಾರ ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ವರುಣನ ಆರ್ಭಟಕ್ಕೆ ಮನೆ, ಬೆಳೆ ಕಳೆದುಕೊಂಡು ಬೀದಿಗೆ ಬಂದ ಜನರು ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳ ಬಳಿ ಅಂಗಲಾಚಿದರು.
ಕಳೆದ ನವೆಂಬರ್ ತಿಂಗಳಲ್ಲಿ ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯ ಜನರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಮಳೆಯಿಂದ ಮನೆ, ರಸ್ತೆ, ಬೆಳೆ ಎಲ್ಲವು ಸರ್ವನಾಶವಾಗಿತ್ತು. ಸುರಿದ ಭಾರಿ ಮಳೆಗೆ ಹಲವು ಬೆಳೆಗಳು ನಾಶವಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಇಷ್ಟಾದ್ರು ಸರ್ಕಾರದಿಂದ ಪರಿಹಾರ ಸಿಕ್ಕಿರಲಿಲ್ಲ. ನಿನ್ನೆ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ. ಮತ್ತು ಕೇಂದ್ರ ಹಣಕಾಸು ಮಂತ್ರಾಲಯದ ಮಹೇಶ ಕುಮಾರ ಒಳಗೊಂಡ ಕೇಂದ್ರ ಅಧ್ಯಯನ ತಂಡದ ಸದಸ್ಯರು ಧಾರವಾಡ ಜಿಲ್ಲೆಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ್ರು.
ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ರೈತರು ಬೆಳೆಹಾನಿ ಬಗ್ಗೆ ವಿವರಣೆ ನೀಡಿದರು. ವೀರಯ್ಯ ಪ್ರಭು ಸ್ವಾಮಿಮಠ ಎಂಬುವರ ಹೊಲಕ್ಕೆ ಭೇಟಿ ನೀಡಿ ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆ ಪರಿಶೀಲನೆ ನಡೆಸಿದ ತಂಡಕ್ಕೆ ರೈತ, ಹೆಚ್ಚಿನ ಪರಿಹಾರ ನೀಡವಂತೆ ಮನವಿ ಮಾಡಿದರು. ಹೆಕ್ಟೇರ್ಗೆ 13 ಸಾವಿರದ 500 ಮಾತ್ರ ಪರಿಹಾರ ನೀಡಲಾಗುತ್ತಿದೆ. ನಾವು ಎಕರೆಗೆ 50 ಸಾವಿರ ಖರ್ಚು ಮಾಡಿದ್ದೇವೆ. ಆದರೆ ಸರ್ಕಾರದ ಈ ಪರಿಹಾರ ನಮಗೆ ಸಾಕಾಗಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಅಧಿಕಾರಿಗಳ ತಂಡ ಹುಬ್ಬಳ್ಳಿ, ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಮನೆ, ರಸ್ತೆ, ಸೇತುವೆ, ಬೆಳೆ ಹಾನಿ ವೀಕ್ಷಣೆ ಮಾಡಿದ್ರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾನಿ ಕುರಿತು ಮಾಹಿತಿ ನೀಡಿದ್ರು. ಹಲವು ಹಳ್ಳಿಗಳಿಗೆ ಭೇಟಿ ನೀಡುವ ಮೊದಲು ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಅತಿವೃಷ್ಟಿ ಕುರಿತು ಫೋಟೋ ಗ್ಯಾಲರಿ ಮೂಲಕ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಿದ್ರು.
ಈ ವೇಳೆ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲೆಯಲ್ಲಿ 96,583 ಹೆಕ್ಟೇರ್ ಕೃಷಿ ಮತ್ತು 8,759 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 93 ಸಾವಿರ ರೈತರಿಗೆ 72 ಕೋಟಿ ಪರಿಹಾರ ನೀಡಲಾಗಿದೆ. ಮನೆ ಹಾನಿಗೆ 12 ಕೋಟಿ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.