ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮದರ್ ಅಂಡ್ ಚೈಲ್ಡ್ ಹೆಲ್ತ್ ಕೇರ್ ಸೆಂಟರ್ ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಈಗಾಗಲೇ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಚಿಕಿತ್ಸೆಗೆ ಕಟ್ಟಡದ ಅನಿವಾರ್ಯತೆ ಇದೆ. ಕೂಡಲೇ ಕಾಮಗಾರಿ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಕಟ್ಟಡ ನಿರ್ಮಾಣದ ಇಂಜಿನಿಯರ್ಗಳಿಗೆ ಸೂಚನೆ ನೀಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಾರತ ಸರ್ಕಾರದ ನ್ಯಾಷನಲ್ ಅರ್ಬನ್ ಮಷಿನ್ ಯೋಜನೆ ಅಡಿ ಹು-ಧಾ ಮಹಾನಗರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 2017ರಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಧಾರವಾಡದಲ್ಲಿ 125 ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ರೀತಿ ಹುಬ್ಬಳ್ಳಿಯ ಕಟ್ಟಡ ಕಾಮಗಾರಿ ಕಳೆದ ವರ್ಷ ಪೂರ್ಣಗೊಳ್ಳಬೇಕಿತ್ತು. ಸದ್ಯಕ್ಕೆ ಬೆಡ್ ಅವಶ್ಯಕತೆ ಇರುವುದರಿಂದ ಇಲ್ಲಿ 300 ಆಕ್ಸಿಜನ್ ಬೆಡ್ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ವಾರದಿಂದ ಹತ್ತು ದಿನದ ಒಳಗಾಗಿ ಕಾಮಗಾರಿ ಪೂರ್ಣಗೊಳಸಲಾಗುತ್ತದೆ ಎಂದರು.
ಈಗಾಗಲೇ 2000 ಬೆಡ್ ವ್ಯವಸ್ಥೆ ಇದೆ. ಹೆಚ್ಚುವರಿಯಾಗಿ 425 ಬೆಡ್ ಗಳು ಸೇರ್ಪಡೆಯಾಗಲಿದೆ. ಬರುವ ಹತ್ತು ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಜನರು ಜಾಗರೂಕತೆಯಿಂದ ಜೀವನ ನಡೆಸಬೇಕು. ರೂಪಾಂತರ ವೈರಸ್ ಅನಿರೀಕ್ಷಿತವಾಗಿ ಬಂದಿದ್ದು, ಬಹಳ ಅಪಾಯಕಾರಿಯಾಗಿದೆ ಹೀಗಾಗಿ ಸರ್ಕಾರ ಹಲವು ನಿಬಂಧನೆಗಳನ್ನು ಹಾಕಿದೆ ಎಂದು ಹೇಳಿದರು.
ಲಾಕ್ ಡೌನ್ ಜಾರಿ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತಗೆದುಕೊಳ್ಳಲಿದೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಕೇಂದ್ರ ಸರ್ಕಾರ ಎರಡು ತಿಂಗಳ ಪಡಿತರ ವಿತರಣೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.