ಹುಬ್ಬಳ್ಳಿ: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಲಘಟಗಿ ತಾಲೂಕಿನ ಸಲಕಿನಕೊಪ್ಪ ಕ್ರಾಸ್ ಬಳಿ ನಡೆದಿದೆ.
ದಾಂಡೇಲಿಯಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಒಂದು ವರ್ಷದ ಮಗು ಸೇರಿದಂತೆ ಸುದರ್ಶನ್ (44), ಬಸವರಾಜ್ (30), ರಾಜಲಕ್ಷ್ಮಿ (29), ರವಿ ಶರ್ಮ (65) ಎಂಬುವವರು ಇದ್ದರು. ವ್ಯಕ್ತಿಯೊಬ್ಬರು ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದು, ಪವಾಡಸದೃಶ ರೀತಿಯಲ್ಲಿ ಯಾವುದೇ ಗಾಯವಾಗದೇ ಮಗುವೊಂದು ಪಾರಾಗಿದೆ.
ತಕ್ಷಣ ಸ್ಥಳಕ್ಕೆ ದೌಡಾಯಿಸಿದ 108 ಆಂಬ್ಯುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಂಬುಲೆನ್ಸ್ ಚಾಲಕ ಕುಮಾರಸ್ವಾಮಿ ಹಾಗೂ ಮೆಡಿಕಲ್ ಟೆಕ್ನಿಷಿಯನ್ ವಿರುಪಾಕ್ಷ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.