ಹುಬ್ಬಳ್ಳಿ : ಕೊಲೆ ಗಡುಕ ಸರ್ಕಾರ ಅವರದ್ದೇ ಇತ್ತು. ಅವರೇ ಕೊಲೆ ಗಡುಕರು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ಧರಾಮಯ್ಯ ಅವರ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಂದು ಬಾರಿ ಕಾಂಗ್ರೆಸ್ನ ಇತಿಹಾಸ ನೋಡಬೇಕು. ಒಂದು ಕಾಲಘಟ್ಟದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ಹಲವಾರು ಸಾಧುಗಳನ್ನು ಗುಂಡಿಟ್ಟು ಕೊಂದಿದ್ದರು. ಸಿದ್ದರಾಮಯ್ಯ ಸಿಎಂ ಇದ್ದಾಗ ಅವರು ಮರೆತಿದ್ದಾರೆ ಪಾಪ ಎಂದು ಲೇವಡಿ ಮಾಡಿದರು.
ಅವರ ಸರ್ಕಾರ ಇದ್ದಾಗ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಈಗ ಅವರು ಅದನ್ನೆಲ್ಲ ಮರೆತು ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಉಪಚುನಾವಣೆ ವಿಚಾರದಲ್ಲಿ ವಿಜಯೇಂದ್ರ ಅವರನ್ನು ಕೈಬಿಟ್ಟು ಮತ್ತೆ ಪಟ್ಟಿಗೆ ಸೇರಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಯಾವುದೇ ಕಿತ್ತಾಟವಿಲ್ಲ.
ನಿನ್ನೆ ಒಂದು ಪಟ್ಟಿ, ಇಂದು ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ. ಇನ್ನೆರಡು ದಿನದಲ್ಲಿ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ. ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಹಲವಾರು ಜನರನ್ನು ಸೇರಿಸಲು ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.
ನವ ಭಾರತ ಮೇಳಕ್ಕೆ ಭೇಟಿ : ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಮೂರು ಸಾವಿರ ಮಠದ ಆವರಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಆಯೋಜಿಸಲಾಗಿದ್ದ ನವ ಭಾರತ ಮೇಳ ಪ್ರದರ್ಶನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಭಾರತೀಯ ಜನತಾ ಪಕ್ಷದ ಜನಪರ ಕಾರ್ಯಗಳ ಭಾವಚಿತ್ರ ಹಾಗೂ ಫಲಕಗಳನ್ನು ವೀಕ್ಷಿಸಿದರು. ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರ ಅಭಿನಂದನೆ ಅಭಿಯಾನಕ್ಕೆ ಚಾಲನೆ ನೀಡಿ, ಫೋಟೋ ತೆಗೆಸಿಕೊಳ್ಳುವ ಮೂಲಕ ನರೇಂದ್ರ ಮೋದಿಯವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹಾಗೂ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಿಗಿ ಉಪಸ್ಥಿತರಿದ್ದರು.