ಹುಬ್ಬಳ್ಳಿ: ರಾಜ್ಯದ ಮೈತ್ರಿ ಸರ್ಕಾರ ಅಲ್ಪಾಯಸ್ಸಿನ ಸರ್ಕಾರವಾಗಿದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದ್ರೆ, ನಮ್ಮ ಮುಖ್ಯಮಂತ್ರಿಗಳಿಗೆ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಷ್ಟೇ ಕಣ್ಣಿಗೆ ಕಾಣುತ್ತಿದೆ. ಕುಮಾರಸ್ವಾಮಿಯವರು ಕುಟುಂಬ ರಾಜಕಾರಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ, ಧಾರವಾಡದ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಬಗ್ಗೆ ಮಾತನಾಡಿದ ಅವರು, ಲಿಂಗಾಯತ ಧರ್ಮ ಮುಂದಿಟ್ಟು ಅವರು ಮತಯಾಚನೆ ಮಾಡುತ್ತಿದ್ದಾರೆ. ಧಾರವಾಡ ಜಿಪಂ ಬಿಜೆಪಿ ಸದಸ್ಯ ಯೋಗೇಶಗೌಡರ ಕೊಲೆಗೆ ಷಡ್ಯಂತ್ರ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದು ವಿನಯ ಕುಲಕರ್ಣಿ ಏನು ಎಂಬುದನ್ನು ತೋರಿಸುತ್ತದೆ. ಹಾಗಾಗಿ ಅವರ ಚಾರಿತ್ರ್ಯವೇ ಅವರನ್ನು ಸೋಲಿಸಲಿದೆ ಎಂದರು.