ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2018-19ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ, ಛಾಯಾಚಿತ್ರ ಹಾಗೂ ವಿಡಿಯೋಗಳಿಗೆ ಪ್ರಶಸ್ತಿ ನೀಡುವ ಮೂಲಕ ಪತ್ರಕರ್ತರಿಗೆ ಪ್ರೋತ್ಸಾಹ ನೀಡಲಾಯಿತು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈ ಬಾರಿ 7 ವಿಭಾಗದಲ್ಲಿನ ಪ್ರಶಸ್ತಿಗಳಿಗೆ 10 ಜನರನ್ನು ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿ ವಿಜೇತರು ಹೀಗಿದ್ದಾರೆ.
1. ಹುಬ್ಬಳ್ಳಿ-ಧಾರವಾಡ ಅವಳಿ ನಗರ ವ್ಯಾಪ್ತಿಯ ಅತ್ಯುತ್ತಮ ವರದಿಗಾಗಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಪ್ರಶಸ್ತಿಯನ್ನು ವಿಜಯ ಕರ್ನಾಟಕದ ಕಾಶಪ್ಪ ಕರದಿನ (ಕಮೀಷನರ್ ಹೊಸ ಕಾರು ಅಪಘಾತ), ಇವರಿಗೆ ನೀಡಲಾಯಿತು.
2. ಅತ್ಯುತ್ತಮ ಲೇಖನಕ್ಕಾಗಿ ಇರುವ ಮಜೇಥಿಯಾ ಫೌಂಡೇಶನ್ ಪ್ರಶಸ್ತಿಯನ್ನು ಉದಯವಾಣಿಯ ಕುಮಾರ ಬೇಂದ್ರೆ (ಇಂಗ್ಲೀಷ್ ಮಾಧ್ಯಮಕ್ಕೆ ವಿರೋಧ ಸಾಧುವೇ) ಹಾಗೂ ಡಾ. ಬಿ.ಎಫ್. ದಂಡಿನ್ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕದ ವಸಂತಗೌಡ ಪಾಟೀಲ (ಭರ್ಜರಿ ಮಳೆ - ಜಲಪಾತಕ್ಕೆ ಜೀವಕಳೆ) ಇವರಿಗೆ ನೀಡಲಾಯಿತು.
3. ಅತ್ಯುತ್ತಮ ಧಾರವಾಡ ಜಿಲ್ಲಾ ಗ್ರಾಮೀಣ ಪ್ರದೇಶ ವ್ಯಾಪ್ತಿಯ ವರದಿಗಾಗಿ ಇರುವ ಮುರಿಗೆಮ್ಮ ಬಸಪ್ಪ ಹೂಗಾರ ಪ್ರಶಸ್ತಿಯನ್ನು ಪ್ರಜಾವಾಣಿಯ ಅಶೋಕ ಘೋರ್ಪಡೆ (ಮೆಣಸಿನಕಾಯಿ ಬೆಳೆ - ಬೆಲೆ ಇಲ್ಲದೇ ಮಂಕಾದ ರೈತ) ಪಡೆದರು.
4. ಅತ್ಯುತ್ತಮ ಪುಟ ವಿನ್ಯಾಸಕ್ಕಾಗಿ ಇರುವ ಸುಲೇಮಾನ್ ಅ. ಮುನವಳ್ಳಿ ಪ್ರಶಸ್ತಿಯು ಉದಯವಾಣಿಯ ಬಸವರಾಜ ಅಂಗಡಿ (ಅವಳಿನಗರದಲ್ಲಿ ಚಿಗರಿ) ಇವರ ಮುಡಿಗೇರಿತು.
5. ಉತ್ತಮ ಸುದ್ದಿಚಿತ್ರಕ್ಕಾಗಿ ಇರುವ ಹುಬ್ಬಳ್ಳಿ ಸಂಜೆ ಪ್ರಶಸ್ತಿಯ ಪ್ರಜಾವಾಣಿಯ ಈರಪ್ಪ ನಾಯ್ಕರ (ಮುಂಗುಸಿ ಚಿನ್ನಾಟ), ಇವರಿಗೆ ನೀಡಲಾಯಿತು.
6. ಇನ್ನು ಉತ್ತಮ ವಿದ್ಯುನ್ಮಾನ ವರದಿಗಾಗಿ ಇರುವ ಕುಶಾಲ್ ಅಣ್ಣಪ್ಪ ಶೆಟ್ಟಿ ಪ್ರಶಸ್ತಿ ಸುವರ್ಣ ಟಿವಿಯ ಗುರುರಾಜ ಹೂಗಾರ ಹಾಗೂ ಆನಂದ ಪತ್ತಾರ (ಅಂಧ ಮಕ್ಕಳ ಶಾಲೆಯ ದಯನೀಯ ಸ್ಥಿತಿ) ಇವರ ಪಾಲಾಯಿತು.
7. ಆಕ್ಸ್ಫರ್ಡ್ ಕಾಲೇಜ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ ಬಿಟಿವಿಯ ಮೆಹಬೂಬ್ ಮುನವಳ್ಳಿ ಹಾಗೂ ಈಶ್ವರ ಮನಗುಂಡಿ (ಕಳ್ಳಭಟ್ಟಿ ಸಾರಾಯಿ ಮಾರಾಟ) ಇವರಿಗೆ ದೊರಕಿತು.
ವಿಜೇತರಿಗೆ ತಲಾ 5 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಪಾಲಿಕೆ ಆಯುಕ್ತ ಸುರೇಶ್ ಹಿಟ್ನಾಳ, ಧಾರವಾಡ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಹಿರಿಯ ಪತ್ರಕರ್ತ ಪಿ.ಆರ್ ಪಂಡ್ರಿ ಇನ್ನಿತರರು ಭಾಗಿಯಾಗಿದ್ದರು.