ಹುಬ್ಬಳ್ಳಿ: ಶಾಂತಿವಾಗಿದ್ದ ವಾಣಿಜ್ಯ ನಗರಿಯಲ್ಲಿ ಶನಿವಾರ ರಾತ್ರೋರಾತ್ರಿ ಅಶಾಂತಿಯ ವಾತಾವರಣ ಭುಗಿಲೆದ್ದಿದೆ. ಅದೊಂದು ಆಡಿಯೋ ಹುಬ್ಬಳ್ಳಿ ಗಲಭೆಗೆ ಮತ್ತಷ್ಟು ಕಾರಣವಾಯ್ತಾ ಎಂಬ ಅನುಮಾನ ಈಗ ಪೊಲೀಸ್ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಲ್ಲು ತೂರಾಟ, ಲಾಠಿ ಚಾರ್ಜ್ ವಿಡಿಯೋ ಶೇರ್ ಮಾಡದಂತೆ ವಾಟ್ಸಪ್ ಗ್ರೂಪ್ಗಳಲ್ಲಿ ಸಂದೇಶವೊಂದು ರವಾನೆಯಾಗಿದ್ದು, ಈಗ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ನಾಳೆ ಕಾನೂನು ಕ್ರಮ ಏನೆಲ್ಲಾ ಆಗುತ್ತೋ ನೋಡೋಣ, ವಿಡಿಯೋ ಶೇರ್ ಮಾಡಿದ್ರೆ ಸಾಕ್ಷಿಯಾಗುತ್ತೆ. ವಿಡಿಯೋಗಳಲ್ಲಿರುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲಾಗುತ್ತೆ. ಮನೆಯಿಂದ ಅವರನ್ನು ಕರೆದುಕೊಂಡು ಹೋಗಿ ಜೈಲಿಗೆ ಹಾಕ್ತಾರೆ. ಇಂದು ಏನೆಲ್ಲಾ ಆಗಿದೆಯೋ, ಅದೆಲ್ಲಾ ನಮ್ಮ ದೇವರ ಸಲುವಾಗಿ. ಲಾಠಿ ಚಾರ್ಜ್ ವಿಡಿಯೋ ಶೇರ್ ಮಾಡಬೇಡಿ, ದೇವರು ಎಲ್ಲರನ್ನೂ ಸುರಕ್ಷಿತವಾಗಿ ಇಡಲಿ, ಈ ತಿಂಗಳಲ್ಲಿ ಏನೆಲ್ಲ ಆಗಿದೆಯೋ ಅದರ ವಿರುದ್ಧ ನಾವೆಲ್ಲ ನಿಲ್ಲೋಣ. ಹೀಗಾಗಿ ಯಾರೂ ವಿಡಿಯೋಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಕಲ್ಲು ತೂರಾಟ ನಡೆಸಿದ ಪುಂಡರ ಬಗ್ಗೆ ಮಾಹಿತಿ ಹಂಚಿಕೊಳ್ಳದಂತೆ ವಾಯ್ಸ್ ಸಂದೇಶ ರವಾನೆಯಾಗಿದ್ದು, ಪೊಲೀಸರು ಇದೇ ವಾಯ್ಸ್ ರೆಕಾರ್ಡರ್ ಇಟ್ಟುಕೊಂಡು ಗಲಭೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
ಕಿಡಿಗೇಡಿಯೋರ್ವ ಧಾರ್ಮಿಕ ಭಾವನೆ ಕೆರಳಿಸುವ ರೀತಿ ವಿಡಿಯೋ ಎಡಿಟ್ ಮಾಡಿ ತನ್ನ ವಾಟ್ಸಪ್ ಸ್ಟೇಟಸ್ ಗೆ ಹಾಕಿದ್ದ ಎನ್ನಲಾಗ್ತಿದೆ. ಇದರಿಂದ ಉದ್ರಕ್ತಗೊಂಡ ಗುಂಪೊಂದು ನಗರದಲ್ಲಿ ರಾತ್ರೋರಾತ್ರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಪೊಲೀಸ್ ವಾಹನಗಳು ಜಖಂ ಆಗಿದ್ದಲ್ಲದೆ, ಕೆಲ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಕೆಲವರನ್ನು ಹೆಡೆಮುರಿ ಕಟ್ಟಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆ ಪ್ರಕರಣ.. ಗೃಹ ಸಚಿವರು ಗಟ್ಟಿತನ ತೋರಿಸುವಂತೆ ಯತ್ನಾಳ್ ಒತ್ತಾಯ