ನವಲಗುಂದ : 2019ರ ಮುಂಗಾರು ಬೆಳೆ ವಿಮೆಯನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಮತ್ತು ಆಶಾ ಕಾರ್ಯಕರ್ತೆಯರಿಗೆ ₹12,000ವರೆಗೆ ಮಾಸಿಕ ವೇತನ ಹೆಚ್ಚಿಸಬೇಕು ಎಂದು ನವಲಗುಂದ ಬ್ಲಾಕ್ ಕಿಸಾನ್ ಕಾಂಗ್ರೆಸ್ ವತಿಯಿಂದ ಸಿಎಂಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
2019ರಲ್ಲಿ ತಾಲೂಕಿನ ರೈತರು ಮುಂಗಾರು ಹಂಗಾಮಿಗಾಗಿ ರೈತರು ಬೆಳೆ ವಿಮಾ ಕಂತು ತುಂಬಿದ್ದು, ಈವರೆಗೂ ಬೆಳೆವಿಮೆ ಬಿಡುಗಡೆಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ಕೊರೊನಾ ಸಂಕಷ್ಟದಿಂದಾಗಿ ರೈತರು ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಹಾಗಾಗಿ ಈ ಕೂಡಲೇ 2019ರ ಮುಂಗಾರು ಬೆಳೆ ವಿಮೆಯನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದರು.
ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಯಾವುದೇ ವೈದ್ಯಕೀಯ ಭದ್ರತೆಯಿಲ್ಲದೆ ಜನಸೇವೆ ಮಾಡುತ್ತಿರುವ ಸಿಬ್ಬಂದಿಗೆ ₹12,000ವರೆಗೆ ಮಾಸಿಕ ವೇತನ ಹೆಚ್ಚಿಸಬೇಕು. ಆರೋಗ್ಯ ಭದ್ರತೆಗಾಗಿ ಸರ್ಕಾರದ ವತಿಯಿಂದ ಉಚಿತ ವಿಮಾ ಸೌಲಭ್ಯ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ವೇಳೆ ವಿನೋದ ಅಸೂಟಿ, ವರ್ಧಮಾನ ಹಿರೇಗೌಡ, ಮಂಜುನಾಥ ಜಾದವ, ನಾರಾಯಣ ರಂಗರೆಡ್ಡಿ, ಶ್ಯಾಮಸುಂದರ ಡಂಬಳ, ಬಡೇಸಾಬ ದೇವರೀಡೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.