ಧಾರವಾಡ: ಕೃಷಿಮೇಳವನ್ನು ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಆಯೋಜನೆ ಮಾಡುತ್ತಿದ್ದೆವು. ಆದ್ರೆ, ಈ ಬಾರಿ ಪ್ರವಾಹದ ಹಿನ್ನೆಲೆ ಜನವರಿಯಲ್ಲಿಯೇ ಮಾಡುತ್ತಿದ್ದೇವೆ ಎಂದು ಧಾರವಾಡದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಕೃಷಿಮೇಳದಲ್ಲಿ ಭಾಗವಹಿಸಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಕೃಷಿಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿನಾಥನ್ ವರದಿ ಜಾರಿ ರೈತರ ಬೇಡಿಕೆಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗ ಹೆಜ್ಜೆ ಇಟ್ಟಿದ್ದೆ. ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಿದೆ. ಕಬ್ಬು ಬೆಳೆಯಲ್ಲಿ ಇಳುವರಿ ಜೊತೆಗೆ ಹೆಚ್ಚು ರಿಕವರಿ ಬರುವ ಸಂಶೋಧನೆಗಳನ್ನು ಕೃಷಿ ವಿಜ್ಞಾನಿಗಳು ಮಾಡಬೇಕಿದೆ. ಕೃಷಿ ವಿವಿ ಕುಲಪತಿಗಳು ಮೇಳ ಮಾಡಬೇಕೋ ಬೇಡವೋ ಅಂತ ಗೊಂದಲದಲ್ಲಿದ್ದರು. ಯಾವುದೇ ಕಾರಣಕ್ಕೂ ಬಿಡುವುದು ಬೇಡ, ಮಾಡೋಣ ಅಂತ ನಿರ್ಣಯ ಮಾಡಿ ಕೃಷಿಮೇಳ ಮಾಡಲಾಗುತ್ತಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಇಳುವರಿ ಜೊತೆಗೆ ರಿಕವರಿ ಬಂದಾಗ ಮಾತ್ರ ಶುಗರ್ ಫ್ಯಾಕ್ಟರಿಗಳು ಹೆಚ್ಚಿನ ದರ ಕೊಡಬಲ್ಲವು. ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು. ಜಗತ್ತಿಗೆ ಅನ್ನ ಕೊಡುವ ರೈತ ಸಮುದಾಯ ದುರಾಸೆಗೆ ಒಳಗಾಗಬಾರದು. ಮನುಷ್ಯನಿಗೆ ಆಯುಷ್ಯ, ಐಶ್ವರ್ಯ ಮತ್ತು ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ಹಂಪಿಯ ಸಾಮ್ರಾಜ್ಯದಲ್ಲಿ ಮುತ್ತು ರತ್ನ ಬೀದಿಯಲ್ಲಿ ಅಳೆಯುತ್ತಿದ್ದರಂತೆ. ಆದರೆ ಈಗ ಹಂಪಿ ಏನಾಗಿ?, ಹಾಳಾಗಿ ಹೋಗಿದೆ ಎಂದು ವಿವರಿಸಿದರು.
ರೈತರು ಸಾವಯವ ಕೃಷಿಗೆ ಒತ್ತು ಕೊಟ್ಟು ಸಮಾಜಕ್ಕೆ ಆಸರೆಯಾಗಿ ನಿಲ್ಲಬೇಕು. ಶೇಂಗಾವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು 3-4 ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕ್ಯಾಬಿನೆಟ್ ಸಭೆ ಕರೆದು, ಶೇಂಗಾ ಖರೀದಿ ಕೇಂದ್ರದ ಕುರಿತು ನಿರ್ಣಯ ಮಾಡುತ್ತೇವೆ ಎಂದರು.
ಕೃಷಿಮೇಳಕ್ಕೆ ಚಾಲನೆ ನೀಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಶೇಕಡಾ 400 ರಷ್ಟು ಹಣ ಭಾರತ ಸರ್ಕಾರ ತೆಗೆದು ಇಟ್ಟಿದೆ. ಸ್ವಾಮಿನಾಥನ್ ವರದಿಯನ್ನು ಹಂತ ಹಂತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ 30 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಕೊಡಲು ನಿರ್ಧಾರ ಮಾಡಲಾಗಿದೆ. ಹನ್ನೆರಡು ಸಾವಿರ ಕೋಟಿ ಹಣವನ್ನು ಜಾನುವಾರುಗಳಿಗೆ ಬರುವ ಕಾಲುಬೇನೆ ರೋಗ ನಿಯಂತ್ರಣ ಮಾಡಲು ತೆಗೆದಿಡಲಾಗಿದೆ ಎಂದರು.
ಇನ್ನು ಮೇಳದಲ್ಲಿ ಕೃಷಿಗೆ ಸಂಬಂಧಿಸಿದ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು. ಕೆಲ ಕೃಷಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜ್ಯ ಸಚಿವರಾದ ಜಗದೀಶ ಶೆಟ್ಟರ್, ಸಿ.ಸಿ. ಪಾಟೀಲ್, ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ ಸೇರಿದಂತೆ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.