ಧಾರವಾಡ: ನಿನ್ನೆ ಮಧ್ಯರಾತ್ರಿ ಧಾರವಾಡ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಒಟ್ಟು ಒಂಭತ್ತು ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ, ನಿಗದಿ ಗ್ರಾಮಕ್ಕೆ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪಘಾತದಲ್ಲಿ 9 ಜನರು ಮೃತಪಟ್ಟಿದ್ದಾರೆ. ಇದು ತುಂಬಾ ದುಃಖದ ಸಂಗತಿ. ಈ ಭಾಗದ ಜನರಿಗೆ ಆಘಾತ ತಂದಿದೆ. ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇವೆ. ಮೃತರ ಸಂಬಂಧಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಇದನ್ನೂ ಓದಿ: ಧಾರವಾಡ ರಸ್ತೆ ಅಪಘಾತ ಪ್ರಕರಣ: ಚಾಲಕನ ಬದಲಾವಣೆಯೇ ಘಟನೆಗೆ ಕಾರಣವಾಯ್ತಾ?
ಘಟನೆ: ಸುಮಾರು 21 ಮಂದಿ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಏಳು ಜನರು ಮೃತಪಟ್ಟಿದ್ದರು. ಬಳಿಕ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಸದ್ಯ ಸಾವಿನ ಸಂಖ್ಯೆ 9ಕ್ಕೆ ಏರಿದೆ.
ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಮನಸೂರ ಗ್ರಾಮದಿಂದ ಬೆನಕನಕಟ್ಟಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದರು. ಮೃತರನ್ನು ಅನನ್ಯ (14), ಹರೀಶ (13) ಶಿಲ್ಪಾ (34) ನೀಲವ್ವ (60) ಮಧುಶ್ರೀ (20) ಮಹೇಶ್ವರಯ್ಯ (11), ಶಂಭುಲಿಂಗಯ್ಯ (35) ಎಂದು ಗುರುತಿಸಲಾಗಿದೆ.
ಅಲ್ಲದೆ, ಗಾಯಗೊಂಡ 11 ಮಂದಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರು ಮೃತರಾಗಿದ್ದಾರೆ. ಚನ್ನವ್ವ (45) ಹಾಗೂ ಮನುಶ್ರೀ (16) ಎಂಬುವರು ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈಗಾಗಲೇ ಹಿರಿಯ ಮಗಳು ಅನನ್ಯ (14)ಳನ್ನು ಕಳೆದುಕೊಂಡ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಸಹೋದರಿ ಮನುಶ್ರೀ ಕೂಡ ಪ್ರಾಣ ಬಿಟ್ಟಿದ್ದಾಳೆ. ಮೃತರೆಲ್ಲರೂ ಕೂಡ ಮದುಮಗನ ಕಡೆಯವರಾಗಿದ್ದಾರೆ.