ಹುಬ್ಬಳ್ಳಿ: ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದ ನಾಲ್ಕು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ತಾಯಿಯೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಖುಷಿ ತಾಲೂಕರ್ (4) ಮೃತಪಟ್ಟ ಬಾಲಕಿ. ಬೆಳಗಾವಿ ಮೂಲದ ಮಹಿಳೆ ಹೆತ್ತ ಮಗಳನ್ನು ಬಿಟ್ಟು ಹೋದ ತಾಯಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಗುವನ್ನು ನಗರದ ಗೋಕುಲ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ತೆರಳಿದ್ದಳು. ಆದ್ರೆ, ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ಸೇರಿಸಲು ವೈದ್ಯರು ಹೇಳಿದ್ದರು. ಆದರಂತೆ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಲು ಹೋದಾಗ ವೈದ್ಯರು ತಪಾಸಣೆ ನಡೆಸಿ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.
ಇದರಿಂದ ಗಾಬರಿಗೊಂಡ ತಾಯಿ ಮಗುವಿನ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿಯೇ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಎಲ್ಲಾ ದೃಶ್ಯಗಳು ಕಿಮ್ಸ್ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ಮಗುವಿನ ತಂದೆಯನ್ನು ಕರೆದು ವಿಚಾರಣೆ ನಡೆಸಿದ ಪೊಲೀಸರು, ಮಗುವಿನ ಮೃತದೇಹವನ್ನು ತಂದೆಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಗೋಕುಲ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ:
ಹುಬ್ಬಳ್ಳಿ ವಿದ್ಯಾನಗರ ಮೂಲದ ಪೂಜಾ ಎನ್ನುವವರು ಬೆಳಗಾವಿ ಮೂಲದ ರಾಜು ತಾಲೂಕರ್ ಎಂಬುವವರನ್ನು ವಿವಾಹವಾಗಿದ್ದಳು. ಇವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಕಳೆದ 20 ದಿನಗಳಿಂದ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಪ್ರಿಯಕರನೊಂದಿಗೆ ಹುಬ್ಬಳ್ಳಿಗೆ ಬಂದಿದ್ದಳು. 10 ದಿನಗಳ ಹಿಂದೆ ಗೋಕುಲ್ ಗ್ರಾಮದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದಳು.