ಹುಬ್ಬಳ್ಳಿ : ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿವೆ. ಇಲ್ಲೊಬ್ಬ ವ್ಯಕ್ತಿ ಸೈನಿಕನ ಹೆಸರಿನಲ್ಲಿ ವಿದ್ಯಾ ಕಾಶಿಯ ಯುವಕನಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬರೀ ಫೋಟೋಗಳನ್ನ ನೋಡಿ ಹಣ ಹಾಕಿದ್ದ ಯುವಕ ಇದೀಗ ಕಂಗಾಲಾಗಿದ್ದಾನೆ.
ಧಾರವಾಡದ ನಿವಾಸಿ ಮಲಿಕ್ ಎಂಬ ಯುವಕನಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಬೈಕ್ ಖರೀದಿಗಿದೆ. ಬೇಕಾದ್ರೆ ನನ್ನನ್ನು ಕೇಳಿ, ಕಡಿಮೆ ಬೆಲೆಗೆ ಕೊಡ್ತೀನಿ ಅಂತ ಹೇಳಿದ್ದಾನೆ. ಮಲಿಕ್ ಸಹ ಬೈಕ್ ಖರೀದಿಸಲು ಮುಂದಾಗಿದ್ದ.
ನಂತರ ಅಪರಿಚಿತ ವ್ಯಕ್ತಿ ತಾನು ಯೋಧ ಅಂತ ಹೇಳಿ, ಮೊದಲು ಜಿಎಸ್ಟಿಗಾಗಿ ಹಣ ಕೊಡಿ ಅಂತ ಹೇಳಿದ್ದಾನೆ. ಬೆಂಗಳೂರಿನಲ್ಲಿ ಬೈಕ್ ಇದೆ ಹಣ ಹಾಕಿ ಬೈಕ್ ಇಲ್ಲಿಂದಲೇ ಕಳಿಸುತ್ತೇನೆ ಅಂತ ಹೇಳಿದ್ದಾನೆ.
ಬೈಕ್ ನೀಡುವುದಾಗಿ ಹೇಳಿದ್ದ ವ್ಯಕ್ತಿ, ಯುವಕನನ್ನ ನಂಬಿಸಲು ಬೈಕ್ ಫೋಟೊ ಸೇರಿ ತಾನು ಸೈನಿಕ ಅನ್ನೋದನ್ನ ತೋರಿಸಲು ಫೋಟೊಗಳನ್ನ ಸಹ ಕಳಿಸಿದ್ದಾನೆ. ಅಲ್ಲದೆ ಜಿಎಸ್ಗಿಗಾಗಿ ಹಣ ಪಡೆದಿದ್ದ ಸೈಬರ್ ವಂಚಕ ನಕಲಿ ಜಿಎಸ್ಟಿ ಬಿಲ್ಗಳನ್ನ ಸೃಷ್ಟಿಸಿ ವಂಚಿಸಿದ್ದಾನೆ.
ಬೈಕ್ ರೆಡಿಯಿದೆ ಪ್ಯಾಕಿಂಗ್ ಸಹ ಆಗಿದೆ, ಫುಲ್ ಹಣ ನೀಡಿದ್ರೆ ಬೈಕ್ ಕಳಿಸುತ್ತೇನೆ ಅಂತ ಯುವಕನಿಂದ ಒಟ್ಟು 20 ಸಾವಿರಕ್ಕೂ ಅಧಿಕ ಹಣವನ್ನ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ.
ಯುವಕ ಸಹ ದೇಶ ಕಾಯುವ ಸೈನಿಕ ಹೇಗೆ ತಾನೇ ಮೋಸ ಮಾಡುತ್ತಾನೆ ಅನ್ನೋ ಒಂದೇ ಒಂದು ಕಾರಣಕ್ಕೆ ಹಣ ಹಾಕಿದ್ದಾನೆ. ಸದ್ಯ ಇದೀಗ ಬೈಕ್ ಸಿಗೋದೆ ಇಲ್ಲ ಅಂತ ಗೊತ್ತಾಗಿ ಹುಬ್ಬಳ್ಳಿಯ ಸೈಬರ್ ಠಾಣೆಯ ಮೆಟ್ಟಿರೇಲಿದ್ದಾನೆ.
ಸೈಬರ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಗುರುತು, ಪರಿಚಯ ಇಲ್ಲದಿರುವವರಿಗೆ ಹಣ ಹಾಕುವ ಮೊದಲು ನೂರಾರು ಬಾರಿ ಯೋಚಿಸಬೇಕಿದೆ. ಅದರಲ್ಲೂ ಅಮಾಯಕ ಜನರನ್ನೇ ಟಾರ್ಗೆಟ್ ಮಾಡುವ ಸೈಬರ್ ವಂಚಕರಿಂದ ಜನ ಸಹ ಜಾಗರೂಕತೆಯಿಂದ ಇರಬೇಕಾಗಿದೆ.