ಧಾರವಾಡ/ತುಮಕೂರು/ಹಾವೇರಿ: ರಾಜ್ಯದ ವಿವಿಧ ಭಾಗಗಳಲ್ಲಿ ಆಂಜನೇಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಲಾಯಿತು.
ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಜಗ್ಗಲಗಿ ಮೇಳದವರು ಹಾಗೂ ಕುಂಭ ಹೊತ್ತ ಹೆಣ್ಣು ಮಕ್ಕಳು ಸಂಭ್ರಮದ ಕಳೆ ಹೆಚ್ಚಿಸಿದರು. ಇತಿಹಾಸ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವಸ್ಥಾನ, ಸೇರಿದಂತೆ ವಿವಿಧ ಹನುಮಂತನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು.
ತುಮಕೂರಿನಲ್ಲೂ ಯುವಕರು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಈ ವೇಳೆ ಮಜ್ಜಿಗೆ, ಪಾನಕ, ಹೆಸರುಬೇಳೆ, ಚಿತ್ರಾನ್ನ, ಮೊಸರನ್ನ, ಕೇಸರಿಬಾತು ಹಾಗೂ ಹಣ್ಣಿನ ರಸಾಯನ ತಯಾರಿಸಿ ಸಾರ್ವಜನಿಕರಿಗೆ ವಿತರಿಸುತ್ತಿದ್ದ ದೃಶ್ಯ ಕಂಡುಬಂತು.
ಹಾವೇರಿಯಲ್ಲಿ ರಾಮಮಂದಿರದ ಪ್ರತಿಕೃತಿ ಆಂಜನೇಯನ ಕೈಯಲ್ಲಿರುವಂತೆ ದೇವಸ್ಥಾನದ ಆರ್ಚಕರು ನಿರ್ಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಜೊತೆಗೆ ಆಂಜನೇಯನಿಗೆ ಬಾದಾಮಿ ಗೋಡಂಬಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಅಲಂಕಾರಕ್ಕೆ 4 ಕೆಜಿ ಗೋಡಂಬಿ ಹಾಗು 2 ಕೆ.ಜಿ ಬಾದಾಮಿಯಲ್ಲಿ ಬಳಸಲಾಗಿದ್ದು ಭಕ್ತರ ಗಮನ ಸೆಳೆಯಿತು.