ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಶ್ರಮಿಸುತ್ತಿದೆ.
ಇಂದು ಧಾರವಾಡ(ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸರ್ಕಾರದ ಕೋವಿಡ್-19ರ ಮಾರ್ಗಸೂಚಿಯನ್ವಯ ಬಸ್, ಮೋಟಾರು ಕ್ಯಾಬ್, ಟೆಂಪೋ ಟ್ರಾವೆಲರ್ ವಾಹನಗಳಿಗೆ ಅನುಮತಿಸಿರುವ ಆಸನಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು.
ಶೇ.50 ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶೇ.50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಕಾರ್ಯಾಚರಣೆಯಲ್ಲಿ ವಾ.ಕ.ರ.ಸಾ. ಸಂಸ್ಥೆಯ-2 ಬಸ್ಸುಗಳು, ಬೇಂದ್ರೆ ನಗರ ಸಾರಿಗೆಯ-3 ಬಸ್ಸುಗಳು, ಬಿ.ಆರ್.ಟಿ.ಎಸ್.ಕಂಪನಿಯ-2 ಬಸ್ಸುಗಳು ಪಿ.ಎಸ್.ಎ-1 ಬಸ್, 3 ಮೋಟಾರು ಕ್ಯಾಬ್‌ಗಳು ಹಾಗೂ 3 ಮ್ಯಾಕ್ಸಿಕ್ಯಾಬ್‌ಗಳ ಮೇಲೆ ನಿಯಮ ಉಲ್ಲಂಘನೆಗಾಗಿ ಒಟ್ಟಾರೆ 14 ವಾಹನಗಳ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. 1 ಬೇಂದ್ರೆ ನಗರ ಸಾರಿಗೆಯ ಬಸ್ಸು ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 4 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.