ದಾವಣಗೆರೆ : ರಾಜ್ಯದಲ್ಲಿ ಮೂರನೇ ಪಂಚಮಸಾಲಿ ಗುರು ಪೀಠ ತಲೆ ಎತ್ತಲಿದೆ. ಈಗಾಗಲೇ ಎರಡು ಪೀಠಗಳಿವೆ. ಮೂರನೇ ಪೀಠ ಏಕೆ ಎಂಬ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.
ಆದರೆ, ಮೂರನೇ ಪಂಚಮಸಾಲಿ ಪೀಠದ ಆರಂಭಕ್ಕೆ ದಾವಣಗೆರೆಯ ಹರಿಹರ ಪಂಚಮಸಾಲಿ ಪೀಠ ಬೆಂಬಲ ನೀಡಿದೆ. ವಚನಾನಂದ ಶ್ರೀಯವರ ನಡೆಗೆ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ಮೂರನೇ ಪಂಚಮಸಾಲಿ ಪೀಠ ಆರಂಭಕ್ಕೆ ಬೆಂಬಲ ನೀಡಿದ್ದಾರೆ.
ಈ ವಿಚಾರ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮೂರನೇ ಪೀಠ ಸ್ಥಾಪನೆಗೆ ಸಚಿವರಾದ ಮುರಗೇಶ್ ನಿರಾಣಿಯರೇ ಕಾರಣ ಎಂದು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಶ್ರೀ ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ಇದೀಗ ಜಿದ್ದಿಗೆ ಬಿದ್ದಂತೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ನೇತೃತ್ವದಲ್ಲಿ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನೂತನ ಪಂಚಮಸಾಲಿ ಪೀಠ ಸ್ಥಾಪನೆಗೆ ಸಿದ್ಧತೆ ನಡೆದಿದೆ.
ಮುಂದಿನ ಫೆ.14ರಂದು ಜಮಖಂಡಿ ತಾಲೂಕಿನ ಅಲಗೂರಿನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹಾಗೂ ಬಬಲೇಶ್ವರ ಬೃಹನ್ಮಠದ ಡಾ.ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ಪೀಠಾರೋಹಣ ಸಮಾರಂಭ ನಡೆಯಲಿದೆ.
ದಿವ್ಯಸಾನಿಧ್ಯ ವಹಿಸಿಕೊಳ್ಳಲು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಕೂಡ ಒಪ್ಪಿಕೊಂಡಿರುವುದು ಕೂಡಲಸಂಗಮ ಪೀಠದವರ ಆಕ್ರೋಶಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಮೂರನೇ ಪಂಚಮಸಾಲಿ ಪೀಠ ವಿಚಾರ.. ಸಚಿವ ಮುರುಗೇಶ ನಿರಾಣಿ ಪರ ಬ್ಯಾಟಿಂಗ್..
ಮೂರನೇ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದ ಜಯಮೃತ್ಯುಂಜಯ ಶ್ರೀಯವರಿಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಯವರು ಮೂರನೇ ಪೀಠ ಸ್ಥಾಪನೆಗೆ ನಾವು ಬೆಂಬಲಿಸುತ್ತೇವೆ ಎಂದು ಸೆಡ್ಡು ಹೊಡೆದಿದ್ದರು.
ಇದರ ಬೆನ್ನಲ್ಲೇ ಮೂರನೇ ಪೀಠದ ನೂತನ ಶ್ರೀಗಳಾದ ಡಾ.ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ವಚನಾನಂದ ಶ್ರೀಯವರನ್ನು ಭೇಟಿಯಾಗಿ ಪೀಠದ ಸ್ಥಾಪನೆಗೆ ಬೆಂಬಲಿಸುವಂತೆ ಕೇಳಿಕೊಂಡಿದ್ದರಂತೆ. ಇದರ ಬೆನ್ನಲ್ಲೇ ಇದೇ ಫೆ.14ರಂದು ಅವರ ಪೀಠಾರೋಹಣ ನಡೆಸಲಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ