ದಾವಣಗೆರೆ: ಹೊಟ್ಟೆ ನೋವು ಎಂದು ಖಾಸಗಿ ಆಸ್ಪತ್ರೆಗೆ ತೆರಳಿದ ವೃದ್ಧೆಗೆ ವೈದ್ಯನೊಬ್ಬ ಆಪರೇಷನ್ ಮಾಡಿ ಬಳಿಕ ಹೊಲಿಗೆ ಹಾಕದೇ ಹಾಗೆಯೇ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಾಕ್ಟರ್ ಮಾಡಿದ ಯಡವಟ್ಟಿನಿಂದ ಇದೀಗ ವೃದ್ಧೆ ನರಳಾಡುತ್ತಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಯಡವಟ್ಟು ಮಾಡಿ ವೃದ್ಧೆಯ ಜೀವಕ್ಕೆ ಕುತ್ತು ತಂದಿದ್ದಾರೆ ಎನ್ನಲಾಗಿದೆ. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಬುಳ್ಳಾಪುರ ಗ್ರಾಮದ 65 ವರ್ಷದ ಅನ್ನಪೂರ್ಣಮ್ಮ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ, ಹೊಟ್ಟೆಯಲ್ಲಿ ಸಮಸ್ಯೆ ಇದೆ, ಚಿಕ್ಕದೊಂದು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯ ಆಪರೇಷನ್ ಮಾಡಿದ್ದಾರೆ. ಆದರೆ ಆಪರೇಷನ್ ಮಾಡಿದ ಡಾಕ್ಟರ್, ಹೊಲಿಗೆ ಹಾಕದೆ ಹಾಗೇ ಬಿಟ್ಟಿರುವುದು ವೃದ್ಧೆಯ ಜೀವಕ್ಕೆ ಕಂಠಕವಾಗಿದೆ ಎನ್ನುತ್ತಿದ್ದಾರೆ ವೃದ್ಧೆಯ ಕುಟುಂಬಸ್ಥರು.
ಹೊಲಿಗೆ ಹಾಕದೆ ಬಿಟ್ಟಿದ್ದೀರಲ್ಲಾ ಸಾರ್ ಎಂದು ಅನ್ನಪೂರ್ಣಮ್ಮ ಮಕ್ಕಳು ಡಾಕ್ಟರ್ಗೆ ಕೇಳಿದರೆ, ಇಲ್ಲ ಅದು ಹಾಗೆಯೇ ಕೂಡಿಕೊಳ್ಳುತ್ತದೆ ಎಂದು ಸಬೂಬು ಹೇಳಿದ್ದಾರೆ. 15 ದಿನಗಳಾದರೂ ಆಪರೇಷನ್ ಮಾಡಿದ ಜಾಗ ಕೂಡಿಕೊಳ್ಳದೇ ಇದೀಗ ಗಾಯವಾಗಿ ಮಾರ್ಪಟ್ಟಿದ್ದೆ. ಗಾಯ ದೊಡ್ಡದಾಗಿ ಕಿಡ್ನಿ ಹಾಗೂ ಬ್ರೈನ್ಗೂ ಸಮಸ್ಯೆಯಾಗಿದೆ. ಲಕ್ಷಾಂತರ ರೂಪಾಯಿ ಬಿಲ್ ನೀಡದೇ ಕೇವಲ ಒಂದು ನೋಟ್ಬುಕ್ನಲ್ಲಿ ಬರೆದು ಕೊಟ್ಟು ಹಣ ಕಟ್ಟಿಸಿಕೊಂಡಿದ್ದಾರೆ ಎಂದು ವೃದ್ಧೆಯ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನ್ನಪೂರ್ಣಮ್ಮರನ್ನು ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು,ವೃದ್ಧೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳತ್ತಿದ್ದಾರೆ. ವೈದ್ಯ ದೀಪಕ್ ಬೊಂದಡೆರವರ ಯಡವಟ್ಟಿನಿಂದಾಗಿ ಆಪರೇಷನ್ ಬಳಿಕ ವೃದ್ಧೆಗೆ ಕಣ್ಣು ಕಾಣುತ್ತಿಲ್ಲ, ಊಟವೂ ಸೇರುತ್ತಿಲ್ಲವಂತೆ. ಅಲ್ಲದೇ, ಕಿಡ್ನಿಗೆ ತೊಂದರೆಯಾಗಿದ್ದು, ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೂಡಲಗಿ ಪಟ್ಟಣದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ ಡಿಎಚ್‌ಒ..!