ದಾವಣಗೆರೆ: ಹಿರಿಯ ಶಿಕ್ಷಕರನ್ನೇ ಕಿಚಾಯಿಸಿ ಸುದ್ದಿಯಾಗಿದ್ದ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಫ್ರೌಡಶಾಲೆಯ ಪುಂಡ ವಿದ್ಯಾರ್ಥಿಗಳಿಗೆ ಗೇಟ್ ಪಾಸ್ ದೊರೆತಿದೆ.
ಹೌದು, ಇದೇ ತಿಂಗಳು 3 ರಂದು ಎಂದಿನಂತೆ ಹಿಂದಿ ಶಿಕ್ಷಕರಾದ ಪ್ರಕಾಶ್ ಬೋಗಾರೆ ಅವರು 10ನೇ ತರಗತಿಗೆ ಪಾಠ ಮಾಡಲು ಕೊಠಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ತರಗತಿಯ ಡಸ್ಟ್ ಬಿನ್ ಲ್ಲಿನ ಕಸ ಹೊರಗಡೆ ಹಾಕಲು ತಿಳಿಸಿದ್ದಾರೆ. ಶಿಕ್ಷಕ ಪ್ರಕಾಶ್ ಅವರು ಹೇಳಿದ ಹಾಗೆ ವಿದ್ಯಾರ್ಥಿಗಳು ಕಸ ಹಾಕಿ ಬಂದು ಪಾಠ ಮಾಡುತ್ತಿದ್ದ, ಶಿಕ್ಷಕರ ಮೇಲೆ ಕಸದ ಡಬ್ಬಿ ಹಾಕಿ ಕಿಚಾಯಿಸಿ, ತಲೆಗೆ ಹೊಡೆದಿದ್ದರು.
ಶಿಕ್ಷಕರ ತಲೆಯ ಮೇಲೆ ಬಕೆಟ್ ಹಾಕಿದ ಪುಂಡರು: ಆದರೂ ಆ ಶಿಕ್ಷಕರು ಈ ಬಗ್ಗೆ ಯಾರ ಬಳಿಯೂ ಹೇಳದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿದ್ದರು. ವಿಷಯ ದೊಡ್ಡದು ಮಾಡಬಾರದೆಂದು ಯಾರಿಗೂ ಹೇಳಿರಲಿಲ್ಲ. ನಂತರ ಈ ಅದೇ ಕಿಡಿಗೇಡಿ ವಿದ್ಯಾರ್ಥಿಗಳು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದರು.
ಅದು ಇದೀಗ ಇಡೀ ಸಮಾಜದ ಆಕ್ರೋಶಕ್ಕೆ ಕಾರಣ ಆಗಿದೆ. ಇದಲ್ಲದೇ ಈ ಗ್ರಾಮದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸಿದ್ದಾರೆ. ಇನ್ನು ಇದರಲ್ಲಿ ಭಾಗಿಯಾದ ಉಜೇರ್, ಆಕಾಶ್, ತರುಣ್, ಸಂದೀಪ್, ರಂಗನಾಥ್ ಎಂಬ ಕಿಡಿಗೇಡಿ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಗೇಟ್ ಪಾಸ್ ನೀಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಶಿಕ್ಷಕ ಶಿವಕುಮಾರ್, ಇದೊಂದು ಅಮಾನವೀಯ ಘಟನೆ. ತರಗತಿ ಒಳಗಡೆ ನಡೆದ ಘಟನೆ ಬಗ್ಗೆ ಶಿಕ್ಷಕರು ಯಾರ ಬಳಿಯೂ ತಿಳಿಸಿಲ್ಲ. ಇದೀಗ ವಿದ್ಯಾರ್ಥಿಗಳು ತೋರಿದ ಅಸಭ್ಯ ವರ್ತನೆ ವಿಡಿಯೋ ವೈರಲ್ ಆಗಿದೆ. ಈ ಕುರಿತು ಮೇಲಧಿಕಾರಿಗಳ ತೀರ್ಮಾನದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದಲ್ಲದೇ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಕೂಡ ವಿದ್ಯಾರ್ಥಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಒಟ್ಟಾರೆ ಈ ಘಟನೆ ವಿಚಾರ ತಿಳಿಯುತ್ತಿದ್ದಂತೆ ಶಾಲೆಗೆ ಡಿಡಿಪಿಐ ಸೇರಿದಂತೆ ಚನ್ನಗಿರಿ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.