ಬೀದರ್/ದಾವಣಗೆರೆ/ಬೆಳಗಾವಿ: ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನೆಲೆ ಬಹುತೇಕ ಎರಡು ವರ್ಷಗಳಿಂದ ಶಾಲೆಯಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಇಂದಿನಿಂದ ಮತ್ತೆ ಶಾಲೆಗಳತ್ತ ಹೆಜ್ಜೆಹಾಕಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 0.14 ಇದ್ದು, ಜಿಲ್ಲೆಯಾದ್ಯಂತ 9 ಮತ್ತು 10 ತರಗತಿಗಳು ಸೇರಿದಂತೆ ಕಾಲೇಜನ್ನು ಆರಂಭಿಸಲಾಗಿದೆ. ಇಂದು ಬೆಳಗ್ಗೆಯಿಂದಲೂ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕೊರೊನಾ ನಿಯಮಾವಳಿಗಳ ಪ್ರಕಾರ ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಒಟ್ಟು 583 ಶಾಲೆಗಳು ಇಂದಿನಿಂದ ಬಾಗಿಲು ತೆರೆದಿದ್ದು, ಅವುಗಳಲ್ಲಿ 166 ಸರ್ಕಾರಿ ಶಾಲೆ ಸರ್ಕಾರ ಅನುದಾನಿತ ಶಾಲೆ 141 ಹಾಗೂ ಅನುದಾನದ ರಹಿತ ಶಾಲೆಗಳು ಸೇರಿವೆ.
ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್..
ಬೆಣ್ಣೆನಗರಿ ದಾವಣಗೆರೆಯಲ್ಲಿ ಇಂದಿನಿಂದ 9,10 ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿವೆ. ಜ್ಞಾನದೇಗುಲಗಳಲ್ಲಿ ವಿದ್ಯಾರ್ಥಿಗಳಿಗೆ ಹೂವಿನ ಮಳೆಸುರಿಸಿ ಪ್ರೀತಿಯಿಂದ ಸ್ವಾಗತ ಕೋರಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಶಾಲಾ ಕೊಠಡಿ ಒಳಗೆ ಬಿಡಲಾಯಿತು. ಇಷ್ಟು ದಿನ ಕೇವಲ ಆನ್ಲೈನ್ ಕ್ಲಾಸ್ಗಳನ್ನು ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಇವತ್ತಿಂದ ಆಫ್ಲೈನ್ ಕ್ಲಾಸ್ ಆರಂಭವಾದ ಹಿನ್ನೆಲೆ ಖುಷಿಯಿಂದಲೇ ಪಾಠ ಕೇಳಿದ್ರು.
ಬೆಳಗಾವಿಯಲ್ಲಿ ಸಮವಸ್ತ್ರ ಧರಿಸಿ ಹುರುಪಿನಿಂದ ಬಂದ ವಿದ್ಯಾರ್ಥಿಗಳು..
ಬೆಳಗಾವಿ ತಾಲೂಕಿನ ವಂಟಮೂರಿ ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ಜಿಲ್ಲೆಯ ಎಲ್ಲ ಶಾಲೆಗಳ ಮಕ್ಕಳು ಸರ್ಕಾರದ ಮಾರ್ಗಸೂಚಿ ಅನ್ವಯ ಮಾಸ್ಕ್ ಧರಿಸಿ ಕೊಠಡಿಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಶಾಲಾ ಕೊಠಡಿಯೊಳಗೆ ಟೈಮ್ ಟೇಬಲ್ ಅಂಟಿಸಿರುವ ಶಿಕ್ಷಕರು, ಎರಡು ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಆನ್ಲೈನ್ ಪಾಠದಿಂದ ನೆಟ್ವರ್ಕ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ಆದ್ರೆ, ಆಫ್ಲೈನ್ ಕ್ಲಾಸ್ ಆರಂಭವಾಗಿದ್ರಿಂದ ತುಂಬಾ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಿಎಂ ಸೂಚನೆ ನೀಡಿದರೂ ಬೆಂಗಳೂರಲ್ಲೇ ಉಳಿದ ಸಚಿವ ಗೋವಿಂದ ಕಾರಜೋಳ:
ಇಂದಿನಿಂದ 9 ರಿಂದ 12ನೇ ತರಗತಿಗಳು ಆರಂಭ ಹಿನ್ನೆಲೆ ತಮ್ಮ ತಮ್ಮ ಜಿಲ್ಲೆಗೆ ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿ ಎಂದು ಕ್ಯಾಬಿನೆಟ್ ಸಚಿವರಿಗೆ ಸಿಎಂ ಸೂಚನೆ ನೀಡಿದ್ದರು. ಆದರೂ ಸಿಎಂ ಸೂಚನೆ ಪಾಲಿಸದೇ ಬೆಳಗಾವಿಗೆ ಬರದೇ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಬೆಂಗಳೂರಲ್ಲೇ ಉಳಿದುಕೊಂಡಿದ್ದಾರೆ.