ದಾವಣಗೆರೆ: ಡಾಂಬರು ರಸ್ತೆ ಸಂಪೂರ್ಣ ಕಿತ್ತು ಹೋಗಿ ಗುಂಡಿಗಳಾಗಿರುವ ರಸ್ತೆಯನ್ನು ಹೊಸದಾಗಿ ನಿರ್ಮಿಸಬೇಕು ಅಂತ ಇಲ್ಲಿನ ಜನ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಇದು, ಸ್ಮಾರ್ಟ್ ಸಿಟಿಯ ವಾರ್ಡ್ವೊಂದರ ಮುಖ್ಯರಸ್ತೆ. ಆದ್ರೆ ಇಲ್ಲಿರುವ ಗುಂಡಿಗಳ ಮಧ್ಯೆ ರಸ್ತೆಯಲ್ಲಿದೆ ಎಂದು ಹುಡುಕಲು ಪರದಾಡಬೇಕು. ವಾಹನ ಸವಾರರು ನಿತ್ಯ ಸರ್ಕಸ್ ಮಾಡಬೇಕು. ಸ್ವಲ್ಪ ಯಾಮಾರಿದ್ರು ಯಾವುದಾದರೊಂದು ಗುಂಡಿಯಲ್ಲಿ ಬಿದ್ದು ಆಸ್ಪತ್ರೆಗೆ ಸೇರೋದು ಗ್ಯಾರಂಟಿ. ಹೀಗಾಗಿ ಮನಾ ಬ್ರಿಗೇಡ್, ಜನತಾ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರು, ವಿಶೇಷವಾಗಿ ಯುವಕರೆಲ್ಲರೂ ಸೇರಿ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳ ಬದಿಯಲ್ಲಿ ಕಾರ್ಪೊರೇಟರ್ ಈಜುವ ಸ್ಥಳ, ಇದು ಸಂಸದರು ಈಜುವ ಸ್ಥಳ, ಇದು ಶಾಸಕರು ಈಜುವ ಸ್ಥಳ, ಪಾಲಿಕೆ ಅಧಿಕಾರಿಗಳು ಈಜುವ ಸ್ಥಳ ಎಂಬ ಫಲಕಗಳನ್ನಿಟ್ಟಿದ್ದಾರೆ. ಅಲ್ಲದೆ, ಆ ಗುಂಡಿಗಳಲ್ಲಿ ಸೋಪು, ಶಾಂಪೂ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಭತ್ತ ನಾಟಿ ಮಾಡಿದ್ದಾರೆ.
ಸ್ಮಾರ್ಟ್ ಸಿಟಿ ದಾವಣಗೆರೆಯ 30 ನೇ ವಾರ್ಡ್ ಕುಂದುವಾಡ ಕೆರೆ ಪಕ್ಕದ ಮುಖ್ಯರಸ್ತೆ ಟಾರ್ ಕಾಣದೇ ಒಂದೂವರೆ ದಶಕ ಕಳೆದಿದೆ. 2004ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಕುಂದುವಾಡ ಕೆರೆ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಗಡಿಬಿಡಿಯಲ್ಲಿ ಈ ರಸ್ತೆ ನಿರ್ಮಾಣವಾಗಿತ್ತು. ಅಂದಿನಿಂದ ಈವರೆಗೆ ರಸ್ತೆ ಟಾರ್ ಕಂಡಿಲ್ಲ. ನಿತ್ಯ ನೂರಾರು ವಾಹನಗಳು, ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತೆರಳುವುದು ಅನಿವಾರ್ಯವಾಗಿದೆ.
ಕುಂದುವಾಡದ ನಿವಾಸಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರು ಇದೀಗ ಆಕ್ರೋಶ ಹೊರಹಾಕಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.