ದಾವಣಗೆರೆ: ಅನುದಾನ ತಂದು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಹೊಸ ಬಡಾವಣೆ ನಿರ್ಮಿಸುತ್ತೇನೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ದೂಡ) ನೂತನ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದ್ದಾರೆ.
ಹಿರಿಯರು, ಕಾರ್ಯಕರ್ತರ ಆಶೀರ್ವಾದದಿಂದ ನನಗೆ ದೂಡ ಅಧ್ಯಕ್ಷ ಸ್ಥಾನ ದೊರೆತಿದೆ. ಸಮಾಜಕ್ಕೆ ದುಡಿಯುವ ಗುರಿ ಹೊಂದಿದ್ದೇವೆ. ಜೊತೆಗೆ 1997-98ರಲ್ಲಿ ಜೆ.ಹೆಚ್.ಪಟೇಲ್ ಅವರ ಆಡಳಿತದಲ್ಲಿ ಬಡಾವಣೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಬಳಿಕ ಮತ್ತೆ ಆ ಕಡೆ ಯಾರೂ ಮುಖ ಮಾಡಿಲ್ಲ. ಹೊಸ ಬಡಾವಣೆ ನಿರ್ಮಿಸಿ ಜನಸಾಮಾನ್ಯರಿಗೆ ಸೈಟ್ ನೀಡುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ತೊಂದರೆ ಆಗದಂತೆ ಕೆಲಸ ಮಾಡಿ ಕೊಡುತ್ತೇವೆ. ನಾನು ಸಾಮಾನ್ಯ ಕಾರ್ಯಕರ್ತನಾದ ಪರಿಣಾಮ ಸಾಮಾನ್ಯ ಜನರ ಕಷ್ಟಗಳು ಗೊತ್ತಿವೆ. ಹೀಗಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ದಾರಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇನೆ ಎಂದರು.