ಮಂಗಳೂರು/ದಾವಣಗೆರೆ/ಮಂಡ್ಯ: ಇಂದು ಮುಂಜಾನೆ ರಾಜ್ಯದ ಹಲವೆಡೆ ವರುಣ ತಂಪೆರೆದಿದ್ದಾನೆ. ದಕ್ಷಿಣ ಕರ್ನಾಟಕದ ದಾವಣಗೆರೆ, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ವರುಣನ ಆಗಮನವಾಗಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಕರಾವಳಿಯಲ್ಲಿ ಮಳೆ...
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಸಾಧಾರಣ ಮಳೆಯಾಗುತ್ತಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ.
ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಕಡಬ, ಆತೂರು, ಕೊಯಿಲ, ರಾಮಕುಂಜ, ಸವಣೂರು, ಕೊಕ್ಕಡ ನೆಲ್ಯಾಡಿಯಲ್ಲಿ ಸಾಧಾರಣಾ ಮಳೆ ಸುರಿಯುತ್ತಿದೆ. ಕಡಬ, ಕೋಡಿಂಬಾಳ, ಪಂಜ ಪ್ರದೇಶದಲ್ಲೂ ತುಂತುರು ಮಳೆಯಾಗಿದೆ
ದಾವಣಗೆರೆಯಲ್ಲೂ ವರುಣನ ಸಿಂಚನ:
ದಾವಣಗೆರೆ ಜಿಲ್ಲೆಯ ಹಲವೆಡೆ ವರ್ಷದ ಮೊದಲ ಮಳೆಯಾಗಿದೆ. 1 ಗಂಟೆಗೂ ಹೆಚ್ಚು ಕಾಲ ಸಾಧಾರಣೆ ಮಳೆಯಾಗಿದೆ.
ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಸೇರಿದಂತೆ ಹಲವೆಡೆ ವರುಣನ ಅಗಮನವಾಗಿದೆ. ಕಳೆದ 3 ತಿಂಗಳಿಂದ ಮಳೆ ವಿಶ್ರಾಂತಿ ನೀಡಿತ್ತು. ವರ್ಷದ ಮೊದಲ ಮಳೆಗೆ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಬಿಸಿಲ ತಾಪಕ್ಕೆ ಬೇಸತ್ತ ಜನರಿಗೆ ತಂಪಾದಂತಾಗಿದೆ. ಇನ್ನು ಮಳೆಯಿಂದ ವಾತಾವರಣ ಕೂಡ ತಂಪಾಗಿದ್ದು, ವರ್ಷಧಾರೆಯಿಂದ ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಸಂತಸವಾಗಿದೆ.
ಸಕ್ಕರ ನಾಡಿಗೆ ತಂಪೆರೆದ ಮಳೆರಾಯ: ಅಕಾಲಿಕ ಮಳೆ ಸಕ್ಕರೆ ಜಿಲ್ಲೆಯ ರೈತರಿಗೆ ಅಚ್ಚರಿ ಮೂಡಿಸಿದೆ. ಮುಂಜಾನೆಯಿಂದ ತುಂತುರು ಮಳೆಯಾಗುತ್ತಿದ್ದು, ಒಣಗಿದ್ದ ಭೂಮಿಗೆ ತಂಪೆರೆದಿದೆ. ಜಿಲ್ಲೆಯ ಬಹುತೇಕ ಕಡೆ ತುಂತುರು ಮಳೆಯಾಗುತ್ತಿದೆ.
ಮಳೆ ಕಂಡು ರೈತರು ಅಚ್ಚರಿಯ ಜೊತೆಗೆ ಸಂತಸ ಪಟ್ಟಿದ್ದಾರೆ. ಬೆಳೆಗಳ ರಕ್ಷಣೆಗಾಗಿ ನಾಲೆಯ ನೀರಿಗಾಗಿ ಕಾಯುತ್ತಿದ್ದವರಿಗೆ ಇಂದು ಬೀಳುತ್ತಿರುವ ತುಂತುರು ಮಳೆ, ಸ್ವಲ್ಪ ನೆಮ್ಮದಿ ತರಿಸಿದೆ. ಇನ್ನು ನಗರ ಪ್ರದೇಶದಲ್ಲಿ ವ್ಯಾಪಾರಿಗಳು ಸ್ವಲ್ಪ ಮಟ್ಟಿನ ನಷ್ಟಕ್ಕೆ ಒಳಗಾಗಿದ್ದಾರೆ. ಗ್ರಾಹಕರು ಮನೆಯಿಂದ ಹೊರಬರದೆ, ವಾಹನ ಸಂಚಾರ ವಿರಳವಾಗಿದೆ.