ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಸುವ 640 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಬರುವ ಏಪ್ರಿಲ್ನಲ್ಲಿ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ. ಆದರೆ ಇದಕ್ಕೆ ವಿಘ್ನ ತರಲು ಯತ್ನಿಸುತ್ತಿದ್ದವನನ್ನು ರೈತರು ಥಳಿಸಿದ್ದಾರೆ.
ದಾವಣಗೆರೆ ತಾಲೂಕಿನ ಕಕ್ಕರಗೋಳ್ ಗ್ರಾಮದ ನಿವಾಸಿ ಮಂಜುನಾಥ್ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುರೆಮಾಕುಂಟೆ ಗ್ರಾಮದಲ್ಲಿ ಕಾಮಗಾರಿ ವಿರುದ್ಧ ಪಿತೂರಿ ನಡೆಸುತ್ತಿದ್ದ ಎಂದು ರೈತರು ಥಳಿಸಿದ್ದಾರೆ. ಥಳಿತಕ್ಕೆ ಒಳಗಾದ ಮಂಜುನಾಥ್ ಪೈಪ್ ಲೈನ್ ಏರ್ ವಾಲ್ಗಳನ್ನು ಓಪನ್ ಮಾಡುತ್ತಿದ್ದ ಎಂದು ರೈತರು ಆರೋಪಿಸಿದ್ದಾರೆ. ಇದನ್ನು ನೋಡಿದ ಕುರೆಮಾಕುಂಟೆ ರೈತರು ಆತನಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಜುನಾಥ್ ವಿರುದ್ಧ ಆರೋಪ: ಸುಮಾರು 640 ಕೋಟಿ ರೂ. ವೆಚ್ಚದ ಯೋಜನೆಯನ್ನು ಬರುವ ಏಪ್ರಿಲ್ನಲ್ಲಿ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಕಾಮಗಾರಿ ಜೋರಾಗಿ ನಡೆದಿದೆ. ಆದ್ರೆ ಈ ವ್ಯಕ್ತಿ ಉದ್ದೇಶ ಪೂರ್ವಕವಾಗಿ ವಾಲ್ ಓಪನ್ ಮಾಡಿ ನೀರು ಮುಂದೆ ಹೋಗದಂತೆ ತಡೆಯುತ್ತಿದ್ದಾನೆ ಎಂದು ಆರೋಪಿಸಿ ರೈತರು ಈತನ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಮಂಜುನಾಥ್ ತಮ್ಮ ಜಮೀನಿನ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಯೋಜನೆ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಬರಲು ಈ ರೀತಿ ಮಾಡುತ್ತಿದ್ದಾನೆ ಎಂಬುದು ಅಧಿಕಾರಿಗಳ ಆರೋಪವಾಗಿದೆ.
ಮಂಜುನಾಥ್ ಹೇಳೋದೇನು? ಆದ್ರೆ ಮಂಜುನಾಥ್ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಪರವಾಬಗಿ ಇಲ್ಲದೇ ನಮ್ಮ ಜಮೀನಿನಲ್ಲಿ ಪೈಪ್ ಲೈನ್ ಹಾಕಿದ್ದಾರೆ. ಇದರಿಂದ ನಮ್ಮ ಜಮೀನು ಹಾಳಾಗಿದೆ. ಹಾಳಾದ ಜಮೀನಿಗೆ ಪರಿಹಾರ ನೀಡಬೇಕು. ಜೊತೆಗೆ ಮುಂದೆ ಆನಾಹುತವಾದರೆ ಯಾರು ಜವಾಬ್ದಾರರು. ಹಾಗಾಗಿ ಭದ್ರತೆ ಬಗ್ಗೆ ಪತ್ರ ಬರೆದುಕೊಡಬೇಕು ಎಂಬುದು ನಮ್ಮ ವಾದ.
ಅಲ್ಲದೇ ಮಂಗಳವಾರದಂದು ನಾನು ಇದೇ ವಿಚಾರದ ಬಗ್ಗೆ ಮಾತನಾಡಲು ರೈತರನ್ನು ಒಂದೆಡೆ ಸೇರಿಸಲು ಹೋಗಿದ್ದೆ. ಆದ್ರೆ ಅಧಿಕಾರಿಗಳೇ ಕುಮ್ಮಕ್ಕು ನೀಡಿ ನನ್ನ ವಿರುದ್ಧ ಕೆಲ ಜನರನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ನನ್ನ ಹೋರಾಟವನ್ನು ನಾನು ನಿಲ್ಲಿಸಲ್ಲ. ಇದೀಗ ನಮ್ಮ ಜಮೀನು ಹಾಳಾಗಿದೆ. ಅದರಲ್ಲಿಯೇ ನಮ್ಮ ಜೀವನ ಸಾಗಬೇಕಿದೆ ಎಂಬುದು ಹಲ್ಲೆಗೊಳಗಾದ ಮಂಜುನಾಥ್ ಅವರ ವಾದ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ: ಸಚಿವ ಸೋಮಣ್ಣ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ
ಹೀಗೆ ಬರದ ನಾಡಿಗೆ ನೀರು ತೆಗೆದುಕೊಂಡು ಹೋಗುವ ಸರ್ಕಾರದ ಯೋಜನೆಗೆ ಮಂಜುನಾಥ್ ಅಡ್ಡಿಯಾಗಿದ್ದಾನೆ. ಇತ ಬಹುತೇಕ ಕಡೆ ಏರ್ ವಾಲ್ ಓಪನ್ ಮಾಡಿದ್ದಾನೆ. ಇದರಿಂದ ನೀರು ಸೋರಿಕೆ ಆಗುತ್ತಿದೆ. ಸೋರಿಕೆ ಆಗದ ನೀರಿನ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡಲಾಗುತ್ತಿದೆ.
ಆದ್ರೆ ವಾಸ್ತವವೇ ಬೇರೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಜುನಾಥ್ ಹೋರಾಟಗಾರ, ವಿದ್ಯಾವಂತ. ಪರಿಹಾರಕ್ಕಾಗಿ ಹೋರಾಟ ಮಾಡಲಿ. ಆದರೆ ಪೈಪ್ ಲೈನ್ ಯೋಜನೆ ಹಾಳು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ.