ದಾವಣಗೆರೆ: ಅವನಿನ್ನೂ ಬಾಳಿ ಬದುಕಬೇಕಾಗಿದ್ದ ಯುವಕ. ಇಂಜಿನಿಯರ್ ಆಗ್ಬೇಕು ಅನ್ನೋ ಕನಸನ್ನು ಹೊತ್ತವನು. ಆದರೆ ಕಾಲೇಜು ಕ್ಯಾಂಪಸ್ನಲ್ಲಿ ಸಂಭವಿಸಿದ ಅಪಘಾತ ಆತನ ಪ್ರಾಣವನ್ನೇ ತೆಗೆದಿದೆ. ಇದಕ್ಕೆ ಕಾಲೇಜಿನ ಆಡಳಿತ ಮಂಡಳಿ ನಿರ್ಲಕ್ಷ್ಯ ಕಾರಣವೆಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.
ಕಣ್ಣೀರಿಟ್ಟ ತಂದೆ...
ಮೇ 13ರಂದು ಕಾಲೇಜಿನ ಆವರಣದಲ್ಲಿರುವ ಟೆನ್ನಿಸ್ ಕೋರ್ಟ್ನಲ್ಲಿ ನೆಟ್‍ಗೆ ಕಟ್ಟಿದ್ದ ಹಗ್ಗವನ್ನ ಹಾಗೇ ಬಿಡಲಾಗಿತ್ತಂತೆ. ಬೈಕ್ನಲ್ಲಿ ಬಂದ ಲಿಖಿತ್ ಕಟ್ಟಿದ್ದ ಹಗ್ಗವನ್ನ ಗಮನಿಸದೆ ಬೈಕ್ ಚಲಾಯಿಸಿ ಕೆಳಗೆ ಬಿದ್ದು ಸಾವನ್ನಪ್ಪಿದ್ದ. ಇದು ಕಾಲೇಜಿನವರ ತಪ್ಪು. ನೆಟ್‍ಗೆ ಕಟ್ಟಿದ ಹಗ್ಗದಿಂದಲೇ ಸಾವು ಸಂಭವಿಸಿದೆ. ಕಾಲೇಜ್ ಒಳಗೆ ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದೇ, ತಮ್ಮ ಮಗನ ಸಾವಿಗೆ ಕಾರಣವೆಂದು ಮೃತ ವಿದ್ಯಾರ್ಥಿಯ ತಂದೆ ಕಣ್ಣೀರಿಟ್ಟರು.
ಕಾಲೇಜು ಮುಂಭಾಗ ಪೋಷಕರ ಪ್ರತಿಭಟನೆ...
ಕಾಲೇಜು ಆಡಳಿತ ಮಂಡಳಿ ಮಾಡಿರುವ ಸಣ್ಣ ಯಡವಟ್ಟು, ನೂರಾರು ಕನಸು ಹೊತ್ತಿದ್ದ ಯುವಕನ ಬದುಕನ್ನೇ ಕಿತ್ತುಕೊಂಡಿದೆ. ಟೆನ್ನಿಸ್ ನೆಟ್ ತೆರವುಗೊಳಿಸಿದ ನಂತರ, ಅದಕ್ಕೆ ಕಟ್ಟಿದ್ದ ಹಗ್ಗವನ್ನು ಹಾಗೆಯೇ ಬಿಟ್ಟಿರೋದು ದುರಂತಕ್ಕೆ ಕಾರಣ ಎನ್ನಲಾಗ್ತಿದೆ. ಹೀಗಾಗಿ ಕಾಲೇಜು ಆಡಳಿತ ಮಂಡಳಿ ಇದಕ್ಕೆ ನೇರ ಹೊಣೆ ಎಂದು ವಿದ್ಯಾರ್ಥಿಯ ಚಿಕ್ಕಮ್ಮ ಕಾಲೇಜು ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವನ್ನಪ್ಪಿದ ಬಳಿಕ ಕಾಲೇಜು ಆಡಳಿತ ಮಂಡಳಿಯ ಯಾರೊಬ್ಬರೂ ಸಹ ಮೃತದೇಹ ನೋಡಲು ಬಂದಿಲ್ಲ, ಒಂದು ಮಾತನ್ನು ಸಹ ಆಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.