ದಾವಣಗೆರೆ : ಈರುಳ್ಳಿ ಬೆಲೆ ಕುಸಿತ ಕಂಡಿದ್ದು, ಕೊಳ್ಳಲು ಗ್ರಾಹಕರು ಇಲ್ಲದಂತಾಗಿದೆ. ಈರುಳ್ಳಿಗೆ ಬೆಲೆ ಇಲ್ಲದ್ದರಿಂದ ದಾವಣಗೆರೆಯಿಂದ ಕೇರಳ, ಹೈದರಾಬಾದ್, ತಮಿಳುನಾಡಿಗೆ ರಫ್ತಾಗಬೇಕಿದ್ದಾ ಈರುಳ್ಳಿಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದ್ದು, ಬೆಲೆ ಇಲ್ಲದೆ ಮಾರುಕಟ್ಟೆಗೆ ತಂದ ಈರುಳ್ಳಿಯನ್ನು ರೈತರು ದಿಕ್ಕು ತೋಚದೆ ಮರಳಿ ಮನೆಗೆ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಒಂದು ಕ್ವಿಂಟಾಲ್ ಸ್ಥಳೀಯ ಈರುಳ್ಳಿಗೆ ಕೇವಲ 100 ರಿಂದ ಇಂದ 200 ರೂಪಾಯಿ ಮಾತ್ರ ಬೆಲೆ ಇದ್ದು, ಈರುಳ್ಳಿ ಮಾರಾಟ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲ ರೈತರು ಈರುಳ್ಳಿ ಮಾರಾಟ ಮಾಡಲು ಮಾರುಕಟ್ಟೆಗೆ ಭೇಟಿ ನೀಡಿ ಕಾದು ಕೂತಿರುವ ದೃಶ್ಯ ಸಾಮಾನ್ಯವಾಗಿದ್ದವು.
ಮಹಾರಾಷ್ಟ್ರ, ನಾಸೀಕ್, ಪುಣೆಯಿಂದ ದಾವಣಗೆರೆ ಮಾರುಕಟ್ಟೆಗೆ ಆಮದಾಗುವ ಒಳ್ಳೇ ಈರುಳ್ಳಿ ಒಂದು ಕೆಜಿಗೆ 10 ರಿಂದ 13 ರೂಪಾಯಿ ಬೆಲೆ ಇದೆ. ಇದರಿಂದ ದಾವಣಗೆರೆ ಜಿಲ್ಲೆಯ ಸ್ಥಳೀಯ ರೈತರು ಬೆಳೆದ ಈರುಳ್ಳಿಗೆ ಒಂದು ಕೆಜಿಗೆ 2 ರೂಪಾಯಿ ಇದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಒಂದು ಎಕರೆ ಜಮೀನಿಗೆ ₹50 ಸಾವಿರ ವ್ಯಯ ಮಾಡಿ ಈರುಳ್ಳಿ ಬೆಳೆದಿದ್ದು, ಮಾರುಕಟ್ಟೆಗೆ ತಂದು ಮಾರಾಟ ಮಾಡುವಷ್ಟರಲ್ಲಿ ಸಾಗಾಟ ವೆಚ್ಚವೂ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿ ಈರುಳ್ಳಿಗೆ ಒಳ್ಳೆಯ ಬೆಲೆ ಇದ್ದ ಕಾರಣ ಹೆಚ್ಚಿನ ರೈತರು ಈರುಳ್ಳಿಯನ್ನೇ ಬೆಳೆದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ರೈತರು ಉತ್ತಮ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕರ ನೇಮಕ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಇಲ್ಲ: ಸಚಿವರ ಸ್ಪಷ್ಟನೆ