ದಾವಣಗೆರೆ : ಒಂದು ಕಾಲದಲ್ಲಿ ಕುಡಿಯುವ ನೀರಿಗೆ ಆಧಾರವಾಗಿದ್ದ ಹೊಂಡ ಕಾಲ ಬದಲಾದಂತೆ ಕಸ ತುಂಬಿ ಹಾಳಾಗಿತ್ತು. ಸದ್ಯ ಅಭಿವೃದ್ಧಿ ಭಾಗ್ಯ ಕಂಡಿರುವ ಪುರಾತನ ಹೊಂಡಕ್ಕೆ ಹೈಟೆಕ್ ಟಚ್ ನೀಡಿ ಕಲ್ಯಾಣಿಯನ್ನಾಗಿ ಮಾರ್ಪಡಿಸಲಾಗಿದ್ದು, ಬೆಣ್ಣೆ ನಗರಿಗೆ ಮತ್ತೊಂದು ಗರಿಯಾಗಿ ಹೊರ ಹೊಮ್ಮಿದೆ.
ಹಳೇ ದಾವಣಗೆರೆಯಲ್ಲಿ ಹೊಂಡದ ವೃತ್ತ ಅಂದ್ರೆ ಇಡೀ ಜಿಲ್ಲೆಗೆ ಚಿರಪರಿಚಿತ. ಈ ಹಿಂದೆ ವೃತ್ತದ ಬಳಿ ಇನ್ನೂರಕ್ಕೂ ಹೆಚ್ಚು ವರ್ಷ ಇತಿಹಾಸವಿರುವ ಹೊಂಡ ಇದ್ದಿದ್ರಿಂದ ಆ ಹೆಸರು ಬಂದಿತ್ತು. ಬದಲಾದ ದಿನಗಳಲ್ಲಿ ಹೊಂಡ ಮುಚ್ಚಿ ಪಾಳು ಬಿದ್ದಿತ್ತು. ಇದರಿಂದ ಮನೆ, ಬೀದಿ ಕಸ ಜೊತೆಗೆ ಕುಡುಕರ ತಾಣವಾಗಿ ಅವ್ಯವಸ್ಥೆಯ ಆಗರವಾಗಿತ್ತು.
ಇದೀಗ ಈ ಐತಿಹಾಸಿಕ ಹೊಂಡಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹೈಟೆಕ್ ಟಚ್ ನೀಡಲಾಗಿದೆ. ಒಂದು ವರ್ಷದಿಂದ ಅದ್ಭತವಾದ ಕಲ್ಯಾಣಿ ನಿರ್ಮಾಗೊಳ್ಳುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಕಲ್ಯಾಣಿ ಮುಂದಿರುವ ಅಂಗಡಿಗಳನ್ನ ತೆರವು ಮಾಡಲಾಗಿದೆ. ಸುಂದರ ಆಕರ್ಷಕ ತಾಣವಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ.
ಸ್ಪಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ಸಂಸದ ಜಿಎಂ ಸಿದ್ದೇಶ್ವರ ಹೆಚ್ಚು ಆಸಕ್ತಿ ಮೇರೆಗೆ ಮೂರು ಕೋಟಿ ರೂ. ಗಿಂತ ಹೆಚ್ಚು ವೆಚ್ಚದಲ್ಲಿ ಕಲ್ಯಾಣಿ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ ರಾಜ್ಯದಲ್ಲಿ ಎಲ್ಲಿಯೂ ಸಹ ಇಂತಹ ದೊಡ್ಡ ಕಲ್ಯಾಣಿ ಇಲ್ಲ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪುಷ್ಕರಣಿ ರಾಜ್ಯದಲ್ಲೇ ಪ್ರಸಿದ್ದ ಪಡೆದ ಪುಷ್ಕರಣಿಯಾಗಿದ್ದು, ಕಲ್ಯಾಣಿ ಮಧ್ಯದಲ್ಲಿ ಗೋಪುರ ಹೊಂದಿದೆ.
ಅದಾದ ಬಳಿಕ ದಾವಣಗೆರೆಯಲ್ಲಿ ಮತ್ತೊಂದು ಅತೀ ದೊಡ್ಡ ಹಾಗೂ ಹೈಟೆಕ್ ಕಲ್ಯಾಣಿ ನಿರ್ಮಾಣಗೊಳ್ಳುತ್ತಿದೆ. ಈ ಕಲ್ಯಾಣಿ ಎಂಟು ಸ್ಟೆಪ್ ಇದ್ದು, 88 ಸ್ಟೋನ್ ಪಿಲ್ಲರ್, 162 ಊರೂಗೋಲು, 80 ಭೀಮ್ ಬಳಸಿ ಹೈಟೆಕ್ ಆಗಿ ನಿರ್ಮಿಸಲಾಗುತ್ತಿದೆ. ಜೊತೆಗೆ ವಿದ್ಯುತ್ ದೀಪಾಲಾಂಕರ, ಕಾರಂಜಿ ನಿರ್ಮಾಣ ಮಾಡಲಾಗುತ್ತಿದೆ.
ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಸಂತೇಬೆನ್ನೂರು ಪುಷ್ಕರಣಿ ಈಗಾಗಲೇ ರಾಜ್ಯದ ಗಮನ ಸೆಳೆದಿದೆ. ನೂರಾರು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಸದ್ಯ ಈಗ ಮತ್ತೊಂದು ಪುಷ್ಕರಣಿ ರಾಜ್ಯದ ಗಮನ ಸೆಳೆಯಲು ಸಜ್ಜಾಗಿದ್ದು, ರಾಜ್ಯದ ಪ್ರವಾಸಿಗರನ್ನು ಕೈಬೀಸಿ ಕರೆಯುವುದರಲ್ಲಿ ಅನುಮಾನವಿಲ್ಲ.