ದಾವಣಗೆರೆ: ಬಿಜೆಪಿ ಅಂದ್ರೆ ಬ್ರಾಹ್ಮಣರ ಪಕ್ಷ. ದಲಿತರು ಹಿಂದುಳಿದವರು ಅಲ್ಲಿ ಹೋಗಬೇಡಿ. ಅದು ಗರ್ಭಗುಡಿ ಸಂಸ್ಕೃತಿ ಪಕ್ಷ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು ಎಂದು ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ ನಗರದಲ್ಲಿರುವ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆದ ಜನಾಶೀರ್ವಾದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಹಿಂದುಳಿದ ಜನಾಂಗ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇದು ಬಿಜೆಪಿ ಶಕ್ತಿ ಎಂದು ಆಕ್ರೋಶಭರಿತವಾಗಿ ಭಾಷಣ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಸಚಿವ ಸಂಪುಟದಲ್ಲಿ 22 ಜನ ಎಸ್ಸಿ- ಎಸ್ಟಿ ಸಂಸದರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ಗಳಲ್ಲಿ ಶೇಕಡಾ 22 ರಷ್ಟು ಹಣ ಎನ್ಜಿಒಗಳಿಗೆ ಹೋಗುತ್ತದೆ. ಈ ಎನ್ಜಿಒಗಳನ್ನು ಬಿಜೆಪಿ, ಆರ್ಎಸ್ಎಸ್ ಅಥವಾ ಡಿಎಸ್ಎಸ್ ನಡೆಸುತ್ತಿಲ್ಲ. ಈ ಎನ್ಜಿಒ ಗಳನ್ನು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ ಎಂದರು.
ನೇರ ರೈಲು ಮಾರ್ಗಕ್ಕೆ ಕೇಂದ್ರ ಗ್ರೀನ್ ಸಿಗ್ನಲ್:
ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ನೇರ ಬೆಂಗಳೂರು ಮಾರ್ಗಕ್ಕೆ ಕೇಂದ್ರ ಒಪ್ಪಿದೆ. ಇದಕ್ಕಾಗಿ 925 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಶೇಕಡಾ 50 ರಷ್ಟು ಹಣ ರಾಜ್ಯ ಸರ್ಕಾರ ಕೊಡಬೇಕು. ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು