ದಾವಣಗೆರೆ : ಅಹಿಂದ ನನ್ನ ಬೆಂಬಲಕ್ಕೆ ಇದೆ ಎಂದು ಹೇಳುತ್ತಿದ್ದೆ. ಹಾಗಾದ್ರೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಯಾಕಪ್ಪ ಸೋತೆ, ಸಿಎಂ ಪದವಿ ಯಾಕಪ್ಪಾ ಕಳೆದುಕೊಂಡೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಕೆ ಎಸ್ ಈಶ್ವರಪ್ಪ ಏಕ ವಚನದಲ್ಲೇ ಟಾಂಗ್ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಹಿಂದುಳಿದ ವರ್ಗಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ದೇವರಾಜ್ ಅರಸು ಅವರ ಬಳಿಕ ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ಸಹಾಯ ಮಾಡಿರುವುದಾಗಿ ಹೇಳ್ತಾರೆ. ಆದ್ರೆ, ಹಿಂದುಳಿದ ವರ್ಗಗಳಿಗೆ ಅವರು ಯಾವುದೇ ಸಹಾಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಹಿಂದುಳಿದ ವರ್ಗದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಿದೆ. ಆದರೆ, ಕಾಂಗ್ರೆಸ್ ಮಾತ್ರ ಹಿಂದುಳಿದ ವರ್ಗದವರನ್ನು ಯಾಕೆ ಪ್ರಧಾನಿ ಮಾಡಿಲ್ಲ? ಸಿದ್ದರಾಮಯ್ಯ ಹಿಂದುಳಿದ ವರ್ಗದ ಯಾರೊಬ್ಬರನ್ನೂ ಮೇಲೆ ತರಲಿಲ್ಲ ಎಂದು ಸಚಿವ ಈಶ್ವರಪ್ಪ ಆರೋಪಿಸಿದರು.
'ಬಿಜೆಪಿ, ಆರ್‌ಎಸ್ಎಸ್‌ನಿಂದ ಹಿಂದುತ್ವ ಉಳಿದಿದೆ': ಬಿಜೆಪಿ ಹಾಗೂ ಆರ್‌ಎಸ್ಎಸ್‌ನಿಂದ ಹಿಂದುತ್ವ ಉಳಿದಿದೆ. ಇಲ್ಲ ಅಂದಿದ್ರೆ ಇಷ್ಟೊತ್ತಿಗೆ ಕಾಂಗ್ರೆಸ್‌ನವರು ಪಾಕಿಸ್ತಾನ ಮಾಡ್ತಾ ಇದ್ರು. ಯಾರು ದೇವರಾಜ್ ಅರಸು ಹೆಸರು ಹೇಳಿಕೊಂಡು ಮೆರೆಯುತ್ತಾರೋ, ಅವರೇ ದುಡ್ಡು ಇದ್ದವರಿಗೆ ಟಿಕೆಟ್ ನೀಡಿದ್ದಾರೆ. ಟಿಕೆಟ್ ಪಡೆದ ಅಭ್ಯರ್ಥಿಗಳಿಗೂ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ. ಆ ಕಾರಣಕ್ಕಾಗಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಪಣ ತೊಡಬೇಕು ಎಂದರು.
ಇದನ್ನೂ ಓದಿ: ಬಿಜೆಪಿ 15 ಗೆಲ್ಲೋದಾದ್ರೆ ಯಾವುದು 10 ಸೋಲುತ್ತಾರೆ ಅನ್ನೋದನ್ನ ಹೇಳಬೇಕಲ್ಲ : ಡಿ ಕೆ ಶಿವಕುಮಾರ್