ದಾವಣಗೆರೆ: ಶರಣ ಚಳವಳಿಯ ಜಾತ್ಯಾತೀತ ಅರಿವಿನ ಮಾರ್ಗವನ್ನು ಬಿತ್ತಲು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭವಾಗಿರುವ 'ಮತ್ತೆ ಕಲ್ಯಾಣ' ಅಭಿಯಾನಕ್ಕೆ ಶೋಷಿತ ಹಿಂದುಳಿದ ಚಿಕ್ಕಪುಟ್ಟ ಸಮುದಾಯಗಳ ಒಕ್ಕೂಟ ಬೆಂಬಲ ಸೂಚಿಸಿದೆ.
'ಮತ್ತೆ ಕಲ್ಯಾಣ' ಕಾರ್ಯಕ್ರಮವನ್ನು ಒಂದು ತಿಂಗಳ ಕಾಲ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಆಗಸ್ಟ್ 22 ರಂದು ದಾವಣಗೆರೆಯ ಎಸ್.ಎಸ್. ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಆಗಸ್ಟ್ 15ರಂದು ಈ ಅಭಿಯಾನದ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆದಿತ್ತು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್, ಆಗಸ್ಟ್ 1 ರಿಂದ 30ರವರೆಗೆ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಜ್ಯಾದ್ಯಂತ ಈ ಆಂದೋಲನ ಜರುಗುತ್ತಿದೆ. ಆದ್ದರಿಂದ 22 ರಂದು ಜರುಗಲಿರುವ ಕಾರ್ಯಕ್ರಮಕ್ಕೆ ಎಲ್ಲ ಹಿಂದುಳಿದ ವರ್ಗಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿ ವಿಶ್ವಗುರುವಾದರು. ಅದು ಮತ್ತೆ ಮರುಕಳುಹಿಸಬೇಕಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಿಂದುಳಿದ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ, ಚಿಕ್ಕಪುಟ್ಟ ಹಿಂದುಳಿದ ಸಮಾಜದವರಿಗೆ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಆನಂದರಾಜ್ ಒತ್ತಾಯಿಸಿದ್ದಾರೆ.