ಹರಿಹರ: ಶ್ರೀ ಕಾಗಿನೆಲೆ ಶ್ರೀಗಳ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ಕುರುಬ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದ ಸಚಿವ ಮಾಧುಸ್ವಾಮಿಗೆ ರಿಲೀಫ್ ಸಿಕ್ಕಿದೆ. ಸ್ವಾಮೀಜಿಯೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದ್ದು ರಾಜ್ಯದಲ್ಲಿನ ಭಕ್ತರು ಪ್ರತಿಭಟನೆಯನ್ನು ನಿಲ್ಲಿಸುವಂತೆ ನಿರಂಜನಾನಂದಪುರಿ ಶ್ರೀ ಆದೇಶಿಸಿದ್ದಾರೆ.
ಇಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಮಾಧುಸ್ವಾಮಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದ್ದು, ಯಶಸ್ವಿಯಾಗಿದೆ. ನಂತರ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿರುವ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಶಾಖಾ ಪೀಠದಲ್ಲಿ ಮಾತನಾಡಿದ ಈಶ್ವರಾನಂದಪುರಿ ಶ್ರೀಗಳು, ಸಿಎಂ ವಿಚಾರಕ್ಕೆ ಗೌರವ ಕೊಟ್ಟು ಪ್ರತಿಭಟನೆ ಹಿಂಪಡೆದಿದ್ದೇವೆ. ವಿವಾದವನ್ನು ಮುಂದುವರಿಸದೇ ಇಲ್ಲಿಗೆ ಅಂತ್ಯಗೊಳಿಸಲಾಗಿದ್ದು, ಚುನಾವಣಾ ಸಮಯದಲ್ಲಿ ಬಿಜೆಪಿಗೆ ಅಂಟಿಕೊಂಡಿದ್ದ ಅನಗತ್ಯ ವಿವಾದ ಶಮನಗೊಂಡಂತಾಗಿದೆ. ಮಾಹಿತಿ ಕೊರತೆಯಿಂದ ಹುಳಿಯಾರ್‌ನಲ್ಲಿ ಗೊಂದಲ ಏರ್ಪಟ್ಟಿತ್ತು. ಕನಕದಾಸರ ವೃತ್ತ ನಿರ್ಮಾಣ ಮಾಡಲು ಸಚಿವ ಮಧುಸ್ವಾಮಿ ಅವರು ತೀರ್ಮಾನ ಮಾಡಿದ್ದಾರೆ ಎಂದರು.
ಸಂಧಾನ ಸಭೆ ಬಳಿಕ ಮಾತನಾಡಿದ ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಗೃಹ ಮಂತ್ರಿಗಳು ಈ ವಿಚಾರಕ್ಕೆ ನಮ್ಮಲ್ಲಿ ಮನವಿ ಮಾಡಿಕೊಂಡಿದ್ದರು. ಸಭೆಯಲ್ಲಿ ನಮಗೆ ಮಾಧುಸ್ವಾಮಿ ಬಗ್ಗೆ ಕೋಪ ಬಂತು. ಅವರ ಕಣ್ಣುಗಳಲ್ಲಿ ನನಗೆ ಸತ್ಯಾಂಶ ಗೊತ್ತಾಯ್ತು. ಕನಕದಾಸರ ವೃತ್ತದಲ್ಲಿ ಬೋರ್ಡ್ ಹಾಕಲು ನಮ್ಮ ಸಮ್ಮುಖದಲ್ಲಿ ಹೇಳಿದರು. ನಮಗೂ ಯಾರ ಮನಸ್ಸು ನೋಯಿಸುವ ಉದ್ದೇಶ ಇರಲಿಲ್ಲ. ಹುಳಿಯಾರು ಸಮಸ್ಯೆ ನಮ್ಮ ಪೀಠದಲ್ಲಿ ಬಗೆಹರಿದಿದೆ. ಸಚಿವರ ನೇತೃತ್ವದಲ್ಲಿ ಕನಕದಾಸರ ವೃತ್ತದಲ್ಲಿ ನಾಮಫಲಕ ಅಳವಡಿಕೆ ಮಾಡಲಾಗುತ್ತದೆ. ಇವತ್ತಿಗೆ ಇದನ್ನು ಅಂತ್ಯ ಮಾಡಲಾಗಿದೆ ಮುಂದೆ ಈ ವಿಚಾರಕ್ಕೆ ಯಾರೂ ಮಾತನಾಡಬಾರದು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಹುಳಿಯಾರು ವೃತ್ತದ ವಿಚಾರವನ್ನು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಗುರುಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಹೊಸದುರ್ಗದ ಸ್ವಾಮೀಜಿಗಳು ಬಗ್ಗೆ ಗೊಂದಲ ಹೇಳಿಕೆ ವಿಚಾರವಾಗಿ ಮಾಹಿತಿ ಕೊರತೆಯಾಗಿತ್ತು. ಸದ್ಯಕ್ಕೆ ಕನಕ ವೃತ್ತ ಮಾಡಲು ತಾತ್ಕಾಲಿಕವಾಗಿ ಬೋರ್ಡ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಕಾನೂನು ರೀತಿಯಲ್ಲಿ ವೃತ್ತಕ್ಕೆ ನಾಮಫಲಕ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ ನನ್ನ ನಿಲುವು ಸ್ಪಷ್ಟ. ಕಾನೂನಾತ್ಮಕವಾಗಿ ಸಮಸ್ಯೆ ಇತ್ತು. ಕನಕ ವೃತ್ತಕ್ಕೆ ಹೆಸರಿಡಲು ಸಮ್ಮತಿ ನೀಡಲಾಗಿದೆ. ಸ್ವಾಮೀಜಿಗಳಿಗೆ ನಾನು ಯಾವುದೇ ಅವಮಾನ ಮಾಡಿಲ್ಲ. ಕೆಲವರು ನಾನು ಏಕ ವಚನದಲ್ಲಿ ಮಾತಾಡಿದ್ದೇನೆ ಎಂದು ಹಲವರು ಹೇಳಿದ್ದಾರೆ. ಇಂದು ಸ್ವಾಮೀಜಿಗಳ ನೇತೃತ್ವದಲ್ಲಿ ಮಾತನಾಡಿದ್ದಕ್ಕೆ ನನ್ನ ಮನಸ್ಸಿಗೆ ಸಮಾಧಾನ ತಂದಿದೆ. ಕುರುಬ ಸಮಾಜಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.