ದಾವಣಗೆರೆ: ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನಗಿರಿಯ ಹಾಲಸ್ವಾಮಿ ವಿರಕ್ತ ಮಠದ ಜಯದೇವ ಸ್ವಾಮೀಜಿ ವಿಧಿವಶರಾಗಿದ್ದಾರೆ.
ಬಹು ದಿನಗಳಿಂದ ಕಫ ಸಮಸ್ಯೆಯಿಂದ ಬಳಲುತ್ತಿದ್ದ ಅವರು, 9 ದಿನಗಳಿಂದ ಆಹಾರ ತ್ಯಜಿಸಿದ್ದರು. ಭಕ್ತರನ್ನು ಭೇಟಿ ಮಾಡುತ್ತಿರಲಿಲ್ಲ. ಇಂದು ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಸ್ವಾಮೀಜಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಮಠದ ಉತ್ತರಾಧಿಕಾರಿ ಚಂದ್ರಮೋಹನ ಸ್ವಾಮೀಜಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಶ್ರೀಗಳ ನಿಧನದಿಂದ ಭಕ್ತ ವೃಂದ ಶೋಕದಲ್ಲಿದೆ. ಮಠದ ಆವರಣದ ಶಿವಲಿಂಗಸ್ವಾಮಿ ಗದ್ದುಗೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದರು.
1945ರ ಜೂನ್ 6ರಂದು ಜನಿಸಿದ್ದ ಶ್ರೀಗಳು, ಎಂ.ಬಿ.ಕರಿಸ್ವಾಮಿ ಹಾಗೂ ಗಂಗಮ್ಮ ದಂಪತಿ ಪುತ್ರ. 1985ರ ನವೆಂಬರ್ 24ರಂದು ಮಠದ ಸ್ವಾಮೀಜಿಯಾಗಿ ದೀಕ್ಷೆ ಪಡೆದಿದ್ದರು. ತ್ರಿಕಾಲ ಪೂಜೆ, ಇಷ್ಟಲಿಂಗ ಪೂಜೆ ನಡೆಸುವುದರಲ್ಲಿ ಖ್ಯಾತಿ ಗಳಿಸಿದ್ದ ಜಯದೇವ ಶ್ರೀಗಳು ಗದ್ದುಗೆಯಲ್ಲಿ ಕುಳಿತು ಪೂಜೆ ನೆರವೇರಿಸಿದ ಬಳಿಕವೇ ಪ್ರಸಾದ ಸೇವಿಸುತ್ತಿದ್ದರು ಎಂದು ಅವರು ಹೇಳಿದರು.