ದಾವಣಗೆರೆ: ಮಲೆನಾಡು ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತುಂಗಾ ಹಾಗೂ ಭದ್ರಾ ನದಿಗಳು ಭರ್ತಿಯಾಗಿವೆ. ಎರಡು ನದಿಗಳಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಬಿಟ್ಟಿದ್ದು, ಹೊನ್ನಾಳಿ ಹಾಗೂ ಹರಿಹರ ಭಾಗಗಳ ನದಿ ಪಾತ್ರದಲ್ಲಿನ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಎರಡೂ ತಾಲೂಕಿನ ತಹಶೀಲ್ದಾರರು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಅಲ್ಲದೇ, ನದಿಯಲ್ಲಿ 9.5 ಮೀಟರ್ ನೀರಿನ ಪ್ರಮಾಣ ಹೆಚ್ಚಾಗಿದೆ. ಇನ್ನೂ ನಾಲ್ಕೈದು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ಈಗಾಗಲೇ ಮುನ್ಸೂಚನೆ ನೀಡಿದ್ದಾರೆ. ಆದರೆ ಸದ್ಯಕ್ಕೆ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿಲ್ಲ. ಅದರೂ ಕೂಡ ಜಾಗರೂಕತೆಯಿಂದ ಇರಬೇಕು ಹರಿಹರ ತಹಶೀಲ್ದಾರ್ ತಿಳಿಸಿದ್ದಾರೆ.
ಹೊನ್ನಾಳಿ ಹಾಗೂ ಹರಿಹರ ಭಾಗದಲ್ಲಿರುವ ಬಹುತೇಕ ಪ್ರದೇಶಗಳು ಪ್ರತಿಬಾರಿ ನೆರೆಹಾವಳಿ ಭೀತಿ ಅನುಭವಿಸುತ್ತಿವೆ. ಸಾವಿರಾರು ಎಕರೆ ಕೃಷಿ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಈಗ 9 ಮೀಟರ್ನಷ್ಟು ನೀರು ಹರಿಯುತ್ತಿದ್ದು, ನೀರಿನ ಮಟ್ಟ 11 ಮೀಟರ್ಗಿಂತ ಹೆಚ್ಚಾದರೆ ಜನವಸತಿ ಪ್ರದೇಶಗಳು ಮುಳುಗಡೆಯಾಗಲಿವೆ.
ಅಲ್ಲದೇ, ಈಗಾಗಲೇ ಮುಳುಗಡೆಯಾಗುವ ಪ್ರದೇಶಗಳಲ್ಲಿ ತಾಲ್ಲೂಕು ಆಡಳಿತ ಸಿಬ್ಬಂದಿ ಹೈ ಅಲರ್ಟ್ ಆಗಿದ್ದು, ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳ ನಿಗದಿ ಮಾಡಿದ್ದಾರೆ. ಹೊನ್ನಾಳಿ ತಹಶೀಲ್ದಾರ್ ರಶ್ಮಿ ಪ್ರತಿಕ್ರಿಯಿಸಿ, ಅನವಶ್ಯಕವಾಗಿ ಯಾರೂ ನದಿಪಾತ್ರಕ್ಕೆ ಹೋಗಬಾರದು ಹಾಗು ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸ ಮಾಡಬೇಡಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳಹರಿವು: ಒಂದೇ ದಿನ 6 ಟಿಎಂಸಿ ನೀರು ಹೆಚ್ಚಳ