ದಾವಣಗೆರೆ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಗ್ನಾಸ್ಟಿಕ್ ಸೇವೆ ಮರಿಚೀಕೆಯಾಗಿದೆ. ಜಿಲ್ಲಾಸ್ಪತ್ರೆ ಹೊರತುಪಡಿಸಿದರೆ ಉಳಿದ ತಾಲೂಕು, ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರದಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೇವೆ ರೋಗಿಗಳಿಗೆ ಲಭ್ಯವಿಲ್ಲ!
ಇದನ್ನೂ ಓದಿ...ದಾವಣಗೆರೆ: ಅಭಿವೃದ್ಧಿಗಾಗಿ ಗ್ರಾಪಂ ಸದಸ್ಯರಿಂದ ಆಣೆ ಪ್ರಮಾಣ
ಜಿಲ್ಲೆಯಲ್ಲಿ ಸುಮಾರು 100 ಸರ್ಕಾರಿ ಆಸ್ಪತ್ರೆಗಳಿವೆ. ಈ ಪೈಕಿ 79 ಪ್ರಾಥಮಿಕ ಆರೋಗ್ಯ ಕೇಂದ್ರ, 11 ನಗರ ಆರೋಗ್ಯ ಕೇಂದ್ರ ಮತ್ತು 4 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಸೇವೆ ಇಲ್ಲ. ಎಕ್ಸ್ ರೇ ಹಾಗೂ ಇಸಿಜಿ ಮಾಡಿಕೊಡುವ ವ್ಯವಸ್ಥೆ ಬಿಟ್ಟರೆ ಮತ್ಯಾವ ಸೇವೆಗಳು ಇಲ್ಲ.
ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಕ್ಸ್ ರೇ, ಇಸಿಜಿ, ರೇಡಿಯೋಲಾಜಿ, ಎಮ್ಆರ್ಐ, ಸಿಟಿ ಸ್ಕ್ಯಾನ್, ಅಲ್ಟ್ರಾ ಸೌಂಡ್ ಸೇವೆಗಳು ಜನರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ತಾಲೂಕು ಆಸ್ಪತ್ರೆಗಳಲ್ಲಿ ಈ ಸೇವೆ ಇಲ್ಲದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ತಳ ಹಂತದ ಆಸ್ಪತ್ರೆಯಿಂದ ಹಿಡಿದು ಜಿಲ್ಲಾಸ್ಪತ್ರೆ ತನಕ ಈ ಸೇವೆಗಳು ಚಾಲ್ತಿಯಲ್ಲಿವೆ. ಹೀಗಾಗಿ, ನಮ್ಮಲ್ಲೂ ಈ ವ್ಯವಸ್ಥೆ ಜಾರಿಯಾಗಬೇಕಿದೆ ಎಂಬುದು ಜನರ ಒತ್ತಾಯ. ಕೆಲ ಆಸ್ಪತ್ರೆಗಳಲ್ಲಿ ಈ ಎಲ್ಲಾ ಸೇವೆಗಳಿದ್ದರೂ ಪ್ರಯೋಜನವಿಲ್ಲದಂತಾಗಿದೆ.