ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ನಗರ ಠಾಣೆ ಪೊಲೀಸರು ನಾಲ್ಕು ಕೇಸ್ ದಾಖಲಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಜೆ.ಸಿ.ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಕಳೆದ ದಿನ ಕಲ್ಲು ತೂರಾಟ ನಡೆದಿತ್ತು. ಕೇಸರಿ ಶಾಲು ಹಾಗೂ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಸುಮೋಟೋ ಕೇಸ್ ದಾಖಲು ಮಾಡಿದ್ದಾರೆ. ಇತ್ತ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದ ಹಿನ್ನೆಲೆಯಲ್ಲಿ ಹಾಗೂ ಕಾಲೇಜಿನ ಪ್ರಾಂಶುಪಾಲರು ನೀಡಿದ ದೂರಿನ ಅನ್ವಯ ಒಂದು ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ 2 ವಿದ್ಯಾರ್ಥಿಗಳು ಗಾಯಗೊಂಡ ಕಾರಣ ಗಾಯಾಳು ವಿದ್ಯಾರ್ಥಿಗಳು ಸಹ ದೂರು ನೀಡಿದ್ದಾರೆ. ಒಟ್ಟು ನಾಲ್ಕು ದೂರುಗಳನ್ನು ಪಡೆದು ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಗಡಿ ದಾಟಿದ ಹಿಜಾಬ್-ಕೇಸರಿ ಶಾಲು ವಿವಾದ: ಮಧ್ಯಪ್ರದೇಶ, ಪುದುಚೇರಿಯಲ್ಲೂ ಕಾಣಿಸಿಕೊಂಡ ಕಿಡಿ
ಹರಿಹರ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ನಿನ್ನೆ ನಡೆದ ಗಲಭೆಯಲ್ಲಿ ಸ್ಥಳೀಯರು ಭಾಗಿಯಾಗಿದ್ದಾರೆ. ಆದರೆ ಯಾವುದೇ ಹೊರ ಜಿಲ್ಲೆ, ರಾಜ್ಯದ ಸಂಘಟನೆಗಳು ಭಾಗಿಯಾಗಿಲ್ಲ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. ಹರಿಹರ ಹಾಗೂ ದಾವಣಗೆರೆ ನಗರದಲ್ಲಿ ಇಂದು ರಾತ್ರಿ 12ರ ತನಕ ಸೆಕ್ಷನ್ 144 ಜಾರಿಯಲ್ಲಿದೆ.