ದಾವಣಗೆರೆ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ನಗದು, ಬಂಗಾರ ಸೇರಿದಂತೆ ಪೀಠೋಪಕರಣಗಳು ಸುಟ್ಟು ಕರಕಲಾದ ಘಟನೆ ನಗರದ ಭಾರತ್ ಕಾಲೋನಿಯಲ್ಲಿ ನಡೆದಿದೆ.
ದಲ್ಲಾಳಿ ಕೆಲಸ ಮಾಡುತ್ತಿದ್ದ ಪ್ರೇಮ್ ಕುಮಾರ್ ಎಂಬುವವರ ಮನೆಯಲ್ಲಿ ದುರ್ಘಟನೆ ನಡೆದಿದೆ. 5 ಲಕ್ಷ ರೂಪಾಯಿ ನಗದು, 65 ಗ್ರಾಂ ಬಂಗಾರ, ಪೀಠೋಪಕರಣಗಳು, ಟಿವಿ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು 11 ಲಕ್ಷದ 50 ಸಾವಿರ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಆಗಿಲ್ಲ.
ಮನೆಯಿಂದ ಹೊರ ಹೋಗುವಾಗ ಮನೆಯಲ್ಲಿನ ಫ್ಯಾನ್ ಆಫ್ ಮಾಡಿರಲಿಲ್ಲ. ಇದರಿಂದಾಗಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಈ ದುರ್ಘಟನೆ ನಡೆದಿದೆ. ಸ್ತ್ರಿಶಕ್ತಿ ಸ್ವಸಹಾಯ ಸಂಘದ ಸದಸ್ಯರಿಗೆ ನೀಡಲೆಂದು ಮನೆಯಲ್ಲಿ 5 ಲಕ್ಷ ರೂಪಾಯಿ ನಗದು ಇಡಲಾಗಿತ್ತು. ಮಗಳಿಗೆಂದು ಬಂಗಾರದ ಒಡವೆಗಳನ್ನು ಖರೀದಿಸಿ ತರಲಾಗಿತ್ತು. ಆದ್ರೆ, ಈ ಘಟನೆಯಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲೀಗ ಶೋಕ ಮಡುಗಟ್ಟಿದೆ. ಈ ಸಂಬಂಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.