ದಾವಣಗೆರೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಬಡವರು, ನಿರ್ಗತಿಕರು, ನಿರಾಶ್ರಿತರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಹೊನ್ನಾಳಿ ಪಟ್ಟಣದಲ್ಲಿ ನಿತ್ಯವೂ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಜೊತೆಗೆ ಮಾಸ್ಕ್ ಸಹ ವಿತರಿಸುತ್ತಿದ್ದಾರೆ.
ನಿತ್ಯವೂ 4 ರಿಂದ 5 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಉಚಿತವಾಗಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಊಟ ತಯಾರಾದ ಬಳಿಕ ಒಮ್ಮೆ ಪರಿಶೀಲನೆ ನಡೆಸುತ್ತಾರೆ. ಬಳಿಕ ರೇಣುಕಾಚಾರ್ಯ ದಂಪತಿ ಸ್ವತಃ ಮುಂದೆ ನಿಂತು ಎಲ್ಲರಿಗೂ ಊಟ ವಿತರಿಸುತ್ತಾರೆ.
ಹೊನ್ನಾಳಿ ಹಾಗೂ ನ್ಯಾಮತಿ ಪಟ್ಟಣದಲ್ಲಿ ಟ್ಯಾಕ್ಸಿ ಮಾಲೀಕರು, ಚಾಲಕರು, ಛಾಯಾಗ್ರಾಹಕರು, ಬೀದಿ ಬದಿ ವ್ಯಾಪಾರಿಗಳು, ಕೊರೊನಾ ವಾರಿಯರ್ಸ್, ನಿರಾಶ್ರಿತರು, ಅಲೆಮಾರಿಗಳು, ಸೇರಿದಂತೆ ಹಸಿದವರಿಗೆ ನಿತ್ಯವೂ ಬಗೆಬಗೆಯ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.
ಇಂದು ಗೃಹ ಇಲಾಖೆ, ಕಂದಾಯ ಇಲಾಖೆಯ ಸಹಾಯಕರು ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು. ಶಾಸಕರ ಈ ಕಾರ್ಯಕ್ಕೆ ಕ್ಷೇತ್ರದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.