ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಭೂಮಿ ಹಾಗು ನಿವೇಶನಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಭೂಗಳ್ಳರ ಕಣ್ಣು ಸೈಟ್ ಮೇಲೆ ಬಿದ್ದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾರ್ಕ್ ಜಾಗದಲ್ಲಿ ನಿವೇಶನಗಳನ್ನು ಕಟ್ಟಿಸಿ ಜನರಿಗೆ ಅಕ್ರಮವಾಗಿ ಮಾರಾಟ ಮಾಡಿ ವಂಚಿಸುತ್ತಿದ್ದಾರೆ ಎಂಬ ದೂರುಗಳಿವೆ.
ಹರಿಹರ-ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಗರದ ನೂರಾರು ಪಾರ್ಕ್ಗಳಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿರುವ ದಾಖಲೆಗಳನ್ನು ಪರಿಶೀಲಿಸಿ, ಪಾರ್ಕ್ ಅನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇದೇ ರೀತಿ ದೂಡಾಗೆ ಸೇರಿದ ಸುಮಾರು ನೂರು ಕೋಟಿ ಆಸ್ತಿಯನ್ನು ದೂಡಾ ಅಧ್ಯಕ್ಷ ಶಿವಕುಮಾರ್ ಹಾಗೂ ಆಯುಕ್ತರಾದ ಕುಮಾರಸ್ವಾಮಿಯವರು ವಶಕ್ಕೆ ಪಡೆದಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ದಾವಣಗೆರೆ ನಗರದ ಎಸ್ಎಸ್ ಲೇಔಟ್ನಲ್ಲಿರುವ ಪಾರ್ಕ್ ಜಾಗದಲ್ಲಿ ನಿವೇಶನಗಳನ್ನು ನಿರ್ಮಾಣ ಮಾಡಿದ್ದರು. ಈ ಕುರಿತು ಪರಿಶೀಲನೆ ನಡೆಸಿದ ದೂಡಾ ಅಧಿಕಾರಿಗಳು ಸೈಟ್ಗಳನ್ನು ಹಾಗೂ ಕಟ್ಟಡವನ್ನು ತೆರವುಗೊಳಿಸಿದ್ದಾರೆ.
ಖಾಸಗಿ ವ್ಯಕ್ತಿಗಳಿಂದ ನಿವೇಶನ ಖರೀದಿಸುವ ಮುನ್ನ ದೂಡಾಕ್ಕೆ ಭೇಟಿ ಕೊಟ್ಟು ಒಮ್ಮೆ ಸ್ಥಳದ ಕುರಿತು ಪರಿಶೀಲನೆ ಮಾಡಿ ಬಳಿಕ ಜಾಗವನ್ನು ಕೊಂಡುಕೊಳ್ಳಿ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಇದಲ್ಲದೆ ಆಶೋಕ್ ನಗರ, ಬೂದಾಳ್ ರಸ್ತೆ, ಎರೆಗುಂಟೆ, ಕರೂರು ಭಾಗದಲ್ಲಿ ಸರ್ಕಾರಕ್ಕೆ ಹಣ ಕಟ್ಟದೆ ಲೇಔಟ್ ಮಾಡಲಾಗುತ್ತಿದ್ದು, ಅತಂಹ ಲೇಔಟ್ಗಳನ್ನು ಪತ್ತೆ ಹಚ್ಚಿ ತೆರುವುಗೊಳಿಸುತ್ತೇವೆ ಎಂದು ಭೂಗಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ.