ದಾವಣಗೆರೆ: ಜಿಲ್ಲಾದ್ಯಂತ ಕೊರೊನಾ ರೋಗ ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಸಮಿತಿಯು 16 ತಂಡಗಳನ್ನು ರಚಿಸಿದೆ. ಅತ್ಯಂತ ಕ್ರಿಯಾಶೀಲವಾಗಿ ವಿಪತ್ತು ನಿರ್ವಹಣೆ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿಪತ್ತು ನಿರ್ವಹಣೆಗೆ ಸಂಪರ್ಕ ಪತ್ತೆ, ಜಾಡು ತಂಡ, ಕ್ವಾರಂಟೈನ್ ನಿರ್ವಹಣೆ, ಅವಶ್ಯಕ ಸಾಮಗ್ರಿ ಪೂರೈಕೆ, ಬಯೋ ಮೆಡಿಕಲ್ ನಿರ್ವಹಣೆ ಹಾಗೂ ಮೃತದೇಹ ನಿರ್ವಹಣೆ, ಆ್ಯಂಬುಲೆನ್ಸ್ ಸಂಚಾರ ನಿರ್ವಹಣೆ ತಂಡ, ತುರ್ತು ಸಂದರ್ಭ ಯೋಜನೆ ನಿರ್ವಹಣೆ, ಕೃಷಿ ಪರಿಕರ ಪೂರೈಕೆ ತಂಡ ಸೇರಿದಂತೆ 16 ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದರು.
ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ವೈದ್ಯಕೀಯ ಹಾಗೂ ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲೆಮಾರಿ, ವಲಸೆ ಕಾರ್ಮಿಕರಿಗೆ ಊಟ ಮತ್ತು ಹಾಲು ವಿತರಿಸಲಾಗುತ್ತಿದೆ. ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಪಡಿತರ ವಿತರಣೆಗೆ ಒಟಿಪಿ ಕಡ್ಡಾಯವಲ್ಲ. ಪಡಿತರ ಪಡೆಯಲು ಬಂದವರಿಗೆ 2 ತಿಂಗಳ ಪಡಿತರ ವಿತರಿಸಲು ಕ್ರಮ ವಹಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕ ಮಂಟೆಸ್ವಾಮಿ ಅವರಿಗೆ ಸೂಚನೆ ನೀಡಿದರು.
208 ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಅಂತ್ಯೋದಯ ಫಲಾನುಭವಿಗಳಿಗೆ ಆಹಾರ ವಿತರಿಸಲಾಗುತ್ತಿದೆ. ಜಿಲ್ಲೆಯ 681 ನ್ಯಾಯಬೆಲೆ ಅಂಗಡಿಗಳ ಪೈಕಿ, 410 ಅಂಗಡಿಗಳಲ್ಲಿ ಅಕ್ಕಿ ಮಾತ್ರ ಲಭ್ಯವಿದೆ. ಶಿವಮೊಗ್ಗದಿಂದ ಗೋಧಿ ಬರಲಿದೆ. ಬಳಿಕ ಅದನ್ನೂ ವಿತರಿಸಲಿದ್ದೇವೆ ಎಂದರು.