ದಾವಣಗೆರೆ: ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಆಗ ತಾನೇ ಜನಿಸಿದ ಶಿಶು ಉಸಿರು ಚೆಲ್ಲಿದೆ. ಪ್ರಾಣವಾಯು ಇಲ್ಲದೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಶಿಶು ಕೊನೆಯುಸಿರೆಳೆದಿದ್ದು, ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೋಷಕರು ಆಸ್ಪತ್ರೆ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಆ್ಯಂಬುಲೆನ್ಸ್ನಲ್ಲಿ ಅಕ್ಸಿಜನ್ ಇಲ್ಲದ ಕಾರಣ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನವಜಾತ ಶಿಶು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಶೃಂಗಾರ ಬಾಬು ತಾಂಡದ ಹಾಲೇಶ್ ನಾಯ್ಕ್, ಸ್ವಾತಿ ದಂಪತಿಯು ಮೊದಲ ಮಗು ಜನಿಸಿದ ಸಂತಸದಲ್ಲಿದ್ದರು. ಆದರೆ ದುರಾದೃಷ್ಟವೆಂಬಂತೆ ಹುಟ್ಟಿದ ಕೆಲ ಗಂಟೆಗಳಲ್ಲೇ ಶಿಶು ಮರಣವನ್ನಪ್ಪಿದೆ.
ಉಸಿರಾಟದ ತೊಂದರೆ: ಶನಿವಾರ ಬೆಳಿಗ್ಗೆ 7 ಗಂಟೆಗೆ ಹೆರಿಗೆ ಆಗಿದ್ದು, ಶಿಶುವಿಗೆ ಉಸಿರಾಟದ ತೊಂದರೆ ಎದುರಾಗಿದೆ. ಹೆರಿಗೆ ಮಾಡಿಸಿದ ಬಸವಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಕ್ಸಿಜನ್ ಇಲ್ಲದಿರುವ ಆ್ಯಂಬುಲೆನ್ಸ್ನಲ್ಲಿ ಹತ್ತಿರದ ಹೊನ್ನಾಳಿ ಆಸ್ಪತ್ರೆಗೆ ರವಾನಿಸಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಆ್ಯಂಬುಲೆನ್ಸ್ನಲ್ಲಿ ಆಕ್ಸಿಜನ್ ಇಲ್ಲ ಎಂದು ಚಾಲಕ ತಿಳಿಸಿದರೂ ಕೂಡ ಬೇರೊಂದು ದಾರಿ ಮಧ್ಯೆ ಆ್ಯಂಬುಲೆನ್ಸ್ ಬರುತ್ತದೆ ಎಂದು ಸಿಬ್ಬಂದಿ ಮಗುವನ್ನು ರವಾನಿಸಿದ್ದಾರೆ. ಅದರೆ ದಾರಿ ಮಧ್ಯೆ ಯಾವುದೇ ಆ್ಯಂಬುಲೆನ್ಸ್ ಬಾರದೆ ಆಕ್ಸಿಜನ್ ಕೊರತೆಯಿಂದ ಹೊನ್ನಾಳಿಗೆ ಹೋಗುವ ಮಾರ್ಗಮದ್ಯೆ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
ಸಿಬ್ಬಂದಿ ವಿರುದ್ಧ ಆಕ್ರೋಶ: ಘಟನೆಯಿಂದ ಆಕ್ರೋಶಿತಗೊಂಡ ಶಿಶುವಿನ ಪೋಷಕರು, ಸಂಬಂಧಿಕರು ಆಸ್ಪತ್ರೆಯ ಮುಂಭಾಗ ಜಮಾಯಿಸಿದ್ದು, ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದರು. ಸ್ಥಳಕ್ಕಾಗಮಿಸಿದ ಬಸವಪಟ್ಟಣ ಠಾಣೆ ಪೊಲೀಸರು ಆಸ್ಪತ್ರೆಗೆ ಬೀಗ ಜಡಿದು ಯಾರೂ ಒಳ ಪ್ರವೇಶಿಸದಂತೆ ನೋಡಿಕೊಂಡರು. ಆದರೂ ಕೂಡ ಹಿಂದೆ ಸರಿಯದ ಪೋಷಕರು ಆಸ್ಪತ್ರೆ ಸಿಬ್ಬಂದಿಯನ್ನು ಕರೆತರುವಂತೆ ಪಟ್ಟು ಹಿಡಿದರಲ್ಲದೆ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರೆದುರು ಕಣ್ಣೀರಿಟ್ಟರು.
ಇದನ್ನೂ ಓದಿ: 2 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಸಹಾಯಕ ಯೋಜನಾಧಿಕಾರಿ!