ದಾವಣಗೆರೆ: ಹೊನ್ನಾಳಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮಳೆ ಸುರಿದ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ವೇಳೆ ಇಬ್ಬರು ಡಿಸಿಎಂಗಳು, ಸಚಿವರು, ಶಾಸಕರು ಸಾಮಾಜಿಕ ಅಂತರವನ್ನೇ ಮರೆತರು. ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಡಾ.ಸಿ.ಎನ್.ಅಶ್ವಥ್ ನಾರಾಯಣ್, ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಅಧಿಕಾರಿಗಳು ಇದ್ದರೂ ಅಂತರ ಕಾಪಾಡಿಕೊಳ್ಳಲಿಲ್ಲ.
ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್ ಸನ್ಮಾನ ಸ್ವೀಕರಿಸುವ ವೇಳೆಯೂ ಅಂತರ ಇರಲಿಲ್ಲ. ರಾಜ್ಯದಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಭೀತಿ ಇದ್ದರೂ ಜನಪ್ರತಿನಿಧಿಗಳ ನಿರ್ಲ್ಯಕ್ಷಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಾರ್ಯಕ್ರಮ ಉದ್ಘಾಟನೆಯಾದ ಹತ್ತು ನಿಮಿಷದ ಬಳಿಕ ಮಳೆ ಸುರಿಯಲಾರಂಭಿಸಿತು. ಸಂಸದ ಜಿ. ಎಂ. ಸಿದ್ದೇಶ್ವರ್ ಹಾಗೂ ರೇಣುಕಾಚಾರ್ಯ ಮಾತ್ರ ಮಾತನಾಡಿದರು. ಮಳೆ ಜೋರಾದ ಕಾರಣ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ್ ಸ್ಥಳದಿಂದ ನಿರ್ಗಮಿಸಿದರು. ಮಳೆ ಬಂದ ಕಾರಣ ಜನರು ಚೇರ್ ಗಳನ್ನು ತಲೆ ಮೇಲೆ ಇಟ್ಟುಕೊಂಡು ಪಾರಾಗಲು ಯತ್ನಿಸಿದರು.