ದಾವಣಗೆರೆ: ಹಣದ ವಿಚಾರವಾಗಿ ಸ್ನೇಹಿತನನ್ನೇ ಹತ್ಯೆ ಮಾಡಿ, ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಇಬ್ಬರನ್ನು ದಾವಣಗೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕೃಷ್ಣಪ್ಪ ಹಾಗೂ ಆತನ ಮಗ ಸತೀಶ್ ಹತ್ಯೆಯ ಆರೋಪಿಗಳಾಗಿದ್ದು, ಹಣದ ವಿಚಾರವಾಗಿ ವಿರೇಶ್ ಎಂಬಾತನನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಡಿಸೆಂಬರ್ 5ರಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅರ್ಧಂಬರ್ಧ ಸುಟ್ಟ ಮೃತದೇಹ ಪತ್ತೆಯಾಗಿತ್ತು. ದಾವಣಗೆರೆ ಗ್ರಾಮಾಂತರ ಠಾಣೆಯ ಪೋಲಿಸರು ಅದನ್ನು ವಶಕ್ಕೆ ಪಡೆದು ಪತ್ತೆಹಚ್ಚಿದ್ದಾಗ, ಚಿತ್ರದುರ್ಗ ಮೂಲದ ಮೃತ ವೀರೇಶ್ ಎಂದು ಗುರುತಿಸಿದ್ದರು.
ವೀರೇಶ್ ನನ್ನು ಮನೆಗೆ ಕರೆಸಿಕೊಂಡಿದ್ದ ಕೃಷ್ಣಪ್ಪ ಮತ್ತು ಅವನ ಮಗ ಎಂ.ಕೆ. ಸತೀಶ್ ಜಗಳವಾಡಿದ್ದಾರೆ. ಒಂದು ಹಂತದಲ್ಲಿ ವೀರೇಶ್ಗೆ ನೇಣು ಬಿಗಿದು ಕೊಲೆ ಮಾಡಿ, ಶವವನ್ನು ಜಗಳೂರು ತಾಲೂಕಿನ ಹುಲಿಕಟ್ಟೆ ಗ್ರಾಮದ ಹೊರ ವಲಯದ ಗೋಮಾಳದಲ್ಲಿ ಶವ ಸುಟ್ಟು ಹಾಕಿದ್ದರು. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಶವದ ಮೇಲಿದ್ದ ಬೆಳ್ಳಿ ಕಡಗ, ಬೆಳ್ಳಿ ಆಮೆಯ ಉಂಗುರದ ಬೆನ್ನತ್ತಿದ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಗಾರರ ಸುಳಿವು ಸಿಕ್ಕಿತು ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೀರೇಶ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದೊಡ್ಡ ರಂಗವ್ವನಹಳ್ಳಿಯ ನಿವಾಸಿ. ಈತನಿಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರುವುದಾಗಿ ತಿಳಿದುಬಂದಿದೆ. ಆಕೆಗೆ ಸಂಬಂಧಿಸಿದ 6 ಎಕರೆ ಜಮೀನಿದ್ದು, ಆ ಜಮೀನು ಮಾರಾಟ ಮಾಡಿಸುವುದಾಗಿ ಹೇಳಿ ಕೃಷ್ಣಪ್ಪ ಎಂಬುವರೊಂದಿಗೆ ವ್ಯವಹಾರ ಕುದುರಿಸಿದ್ದ ಎಂದು ಹೇಳಿದ್ದಾರೆ.
30.5 ಲಕ್ಷ ರೂ.ಗೆ ಜಮೀನು ಮಾರಾಟ ಮಾಡಿದ್ದರು ಕೂಡ ಜಮೀನಿನ ಹಕ್ಕು ಬದಲಾವಣೆ ಆಗಿರಲಿಲ್ಲ. ಹಕ್ಕು ಬದಲಾವಣೆ ಹಾಗೂ ಹಣಕಾಸು ವಿಚಾರವಾಗಿ ಕೃಷ್ಣಪ್ಪ ಮತ್ತು ಮೃತ ವೀರೇಶ್ನ ಮಧ್ಯೆ ಆಗಾಗ ಗಲಾಟೆ ನಡೆದಿದ್ದವು. ಇದು ಕೊಲೆಯ ಹಂತಕ್ಕೆ ಬಂದು ತಲುಪಿತು ಎಂದರು.